ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ನಡೆದಿದ್ದ ಗುಂಡಿನ ದಾಳಿ ಪ್ರಕರಣ ಸಂಬಂಧ ಪಂಜಾಬ್‌ನಲ್ಲಿ ಬಂಧಿಸಲಾಗಿದ್ದ ಇನ್ನಿಬ್ಬರು ಆರೋಪಿಗಳನ್ನು ಶುಕ್ರವಾರ ಮುಂಬೈ ಕೋರ್ಟ್ ಇದೇ 30ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಆರೋಪಿಗಳಾದ ಸುಭಾಷ್ ಚಂದರ್ (37) ಮತ್ತು ಅನೂಜ್ ತಪನ್ (32) ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈಗಾಗಲೇ ಬಂಧಿಸಲಾಗಿರುವ ಇಬ್ಬರು ಶೂಟರ್‌ಗಳಾದ ಸಾಗರ್ ಪಾಲ್ (21) ಮತ್ತು ವಿಕ್ಕಿ ಗುಪ್ತಾಗೆ (24) ಪಿಸ್ತೂಲ್‌ಗಳು ಮತ್ತು ಗುಂಡುಗಳನ್ನು ಪೂರೈಸಿರುವ ಆರೋಪದ ಮೇರೆಗೆ ಈ ಆರೋಪಿಗಳನ್ನು ಅಪರಾಧ ವಿಭಾಗದ ಪೊಲೀಸರು ಗುರುವಾರ ಬಂಧಿಸಿದ್ದರು.
ಪ್ರಮುಖ ಆರೋಪಿಗಳಾಗಿರುವ ಈ ಇಬ್ಬರನ್ನು ತಾಂತ್ರಿಕ ಸಾಕ್ಷ್ಯ ಆಧರಿಸಿ ಬಂಧಿಸಲಾಗಿದೆ. ಶಸ್ತ್ರಾಸ್ತ್ರಗಳನ್ನು ಪೂರೈಸಿದವರ ಪತ್ತೆಗಾಗಿ ಇವರನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ದೇಶಿ ನಿರ್ಮಿತ ಎರಡು ಪಿಸ್ತೂಲ್‌ಗಳು ಮತ್ತು 38 ಗುಂಡುಗಳನ್ನು ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾಗೆ ತಲುಪಿಸಲು ಚಂದರ್ ಮತ್ತು ತಪನ್ ಮಾರ್ಚ್ 15ರಂದು ಮುಂಬೈ ಸಮೀಪದ ರಾಯಗಢ ಜಿಲ್ಲೆ ಪನ್ವೆಲ್‌ಗೆ ಬಂದಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ನ್ಯಾಯಾಲಯವು ಗುರುವಾರ, ಪಾಲ್ ಮತ್ತು ಗುಪ್ತಾ ಅವರನ್ನು ಇದೇ 29 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಈ ನಾಲ್ವರು ಆರೋಪಿಗಳಲ್ಲದೆ, ಜೈಲಿನಲ್ಲಿರುವ ಪಾತಕಿ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದಲ್ಲಿ ಬೇಕಾಗಿರುವ ಮತ್ತಿಬ್ಬರು ಪ್ರಮುಖ ಆರೋಪಿಗಳೆಂದು ಪೊಲೀಸರು ಘೋಷಿಸಿದ್ದಾರೆ.
ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಏ.14ರ ನಸುಕಿನಲ್ಲಿ ಗುಪ್ತಾ ಮತ್ತು ಪಾಲ್ ಗುಂಡು ಹಾರಿಸಿ, ಬೈಕಿನಲ್ಲಿ ಪರಾರಿಯಾಗಿದ್ದರು. ಈ ಇಬ್ಬರನ್ನು ಏ.16 ರಂದು ಗುಜರಾತ್‌ನ ಕಛ್ ಜಿಲ್ಲೆಯ ಮಾತಾ ನೊ ಮಧ್ ಗ್ರಾಮದಿಂದ ಬಂಧಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.