ನವದೆಹಲಿ: ‘ಮಾನವ ಕೇಂದ್ರಿತ ಹಾಗೂ ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿಗೆ ಜಿ20 ಶೃಂಗಸಭೆಯು ಹೊಸ ದಾರಿಯನ್ನು ತೋರಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ‘ಭಾರತ ಮಂಟಪ’ದಲ್ಲಿ ಶನಿವಾರ ಆರಂಭವಾಗಲಿರುವ ಎರಡು ದಿನಗಳ ಶೃಂಗಸಭೆ ಹಿನ್ನೆಲೆಯಲ್ಲಿ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿರ್ಗತಿಕರು, ಸಮಾಜದ ಕಟ್ಟಕಡೆಯಲ್ಲಿರುವ ವ್ಯಕ್ತಿಯ ಕಲ್ಯಾಣಕ್ಕೆ ಶ್ರಮಿಸಬೇಕು ಎಂಬ ಮಹಾತ್ಮ ಗಾಂಧಿ ಅವರ ಧ್ಯೇಯವನ್ನು ತಮ್ಮ ಪೋಸ್ಟ್‌ನಲ್ಲಿ ಪ್ರಸ್ತಾಪಿಸಿರುವ ಮೋದಿ, ಬರುವ ದಿನಗಳಲ್ಲಿ ಮಾನವ ಕೇಂದ್ರಿತ ಪ್ರಗತಿ ಸಾಧಿಸುವುದಕ್ಕೆ ಭಾರತ ಒತ್ತು ನೀಡಲಿದೆ ಎಂದಿದ್ದಾರೆ.
‘ತಂತ್ರಜ್ಞಾನ ಆಧಾರಿತ ಪರಿವರ್ತನೆ, ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯದಂತಹ ಭವಿಷ್ಯದ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಲಿಂಗತ್ವ ಸಮಾನತೆ, ಮಹಿಳಾ ಸಬಲೀಕರಣ ಹಾಗೂ ವಿಶ್ವ ಶಾಂತಿಗಾಗಿ ಸಾಮೂಹಿಕ ಕೆಲಸ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.
‘ವಸುಧೈವ ಕುಟುಂಬಕಂ– ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯ ಎಂಬುದು ಜಿ20ರ ಪ್ರಸ್ತುತ ಧ್ಯೇಯವಾಕ್ಯ. ಈ ಮೌಲ್ಯಗಳು ನಮ್ಮ ಸಂಸ್ಕೃತಿಯ ವಿಶಿಷ್ಟ ಲಕ್ಷಣ. ವಿಶ್ವ ಕುರಿತ ನಮ್ಮ ದೃಷ್ಟಿಕೋನದಲ್ಲಿಯೂ ಇದು ಪ್ರತಿಧ್ವನಿಸುತ್ತದೆ’ ಎಂದು ಮೋದಿ ವಿವರಿಸಿದ್ದಾರೆ.
ಭಾರತೀಯರ ಆತಿಥ್ಯವನ್ನು ವಿದೇಶಿ ಗಣ್ಯರು ಸಂಭ್ರಮಿಸುತ್ತಾರೆ ಎಂಬ ನಂಬಿಕೆ ಇದೆ
ಜಾಗತಿಕ ನಾಯಕರು ಭಾನುವಾರ ರಾಜಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ಗೌರವ ಸಲ್ಲಿಸುವರು
ಜಿ20 ಧ್ಯೇಯವಾಕ್ಯ ‘ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯ’ ಕುರಿತು ಜಾಗತಿಕ ನಾಯಕರು ಸಮಾರೋಪ ಸಮಾರಂಭದಲ್ಲಿ ತಮ್ಮ ಮುನ್ನೋಟ ಹಂಚಿಕೊಳ್ಳುವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.