ADVERTISEMENT

ಲವ್‌ ಜಿಹಾದ್‌ ಕಾನೂನಿನ ಅಡಿ ಮೊದಲ ಬಾರಿಗೆ ಶಿಕ್ಷೆ: ಅಪರಾಧಿಗೆ 5 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 14:17 IST
Last Updated 18 ಸೆಪ್ಟೆಂಬರ್ 2022, 14:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಲಖನೌ: ಲವ್‌ ಜಿಹಾದ್‌ ನಿಯಂತ್ರಣ ಕಾನೂನಿನಡಿ ಆರೋಪಿಯೊಬ್ಬನಿಗೆ ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಶಿಕ್ಷೆಯಾಗಿದೆ. ಮುಸ್ಲಿಂ ಸಮುದಾಯದ ಮೊಹಮ್ಮದ್‌ ಅಫ್ಜಲ್‌ ಎಂಬಾತನಿಗೆ ಅಮರೋಹ ಜಿಲ್ಲೆಯ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಿದೆ.

ಸಂಭಾಲ್‌ ಜಿಲ್ಲೆಯ ನಿವಾಸಿಯಾಗಿರುವ ಅಫ್ಜಲ್‌, ಹಿಂದೂ ಸಮುದಾಯದ ಯುವತಿಯನ್ನು ಮದುವೆಯಾಗಲು ಯತ್ನಿಸಿದ್ದ. ಹುಸಿ ಭರವಸೆಗಳನ್ನು ನೀಡಿದ್ದ ಆತ, ತಾನು ಹಿಂದೂ ಧರ್ಮಕ್ಕೆ ಸೇರಿದವನು ಎಂದು ಯುವತಿಯನ್ನು ನಂಬಿಸಿದ್ದ.

ಯುವತಿಯ ತಂದೆಯು ಅಮರೋಹ ಜಿಲ್ಲೆಯ ಹಸನ್‌ಪುರದಲ್ಲಿ ‘ನರ್ಸರಿ’ ನಡೆಸುತ್ತಿದ್ದರು. ವೃತ್ತಿಯಲ್ಲಿ ಚಾಲಕನಾಗಿದ್ದ ಅಫ್ಜಲ್‌, ಸಸಿಗಳನ್ನು ಖರೀದಿಸುವ ಸಲುವಾಗಿ ಆಗಾಗ ‘ನರ್ಸರಿ’ಗೆ ಹೋಗುತ್ತಿದ್ದ. ಅಲ್ಲಿ ಯುವತಿಯನ್ನು ಭೇಟಿ ಮಾಡಿದ್ದ. ತನ್ನ ಹೆಸರು ಅರ್ಮಾನ್‌ ಕೊಹ್ಲಿ ಎಂದು ಹೇಳಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಪರಿಚಯ ಸ್ನೇಹಕ್ಕೆ ತಿರುಗಿತ್ತು. ಬಳಿಕ ಇಬ್ಬರೂ ಮನೆಬಿಟ್ಟು ಹೋಗಿದ್ದರು.

ADVERTISEMENT

‘ತನ್ನ ಮಗಳನ್ನು ಅಫ್ಜಲ್‌ ಅಪಹರಿಸಿದ್ದಾನೆ ಎಂದು ಯುವತಿಯ ತಂದೆ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಕಳೆದ ವರ್ಷದ ಏಪ್ರಿಲ್‌ನಲ್ಲಿ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಆತನ ವಿರುದ್ಧ ಲವ್‌ ಜಿಹಾದ್‌ ನಿಯಂತ್ರಣ ಹಾಗೂ ಪೋಕ್ಸೊ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿತ್ತು. ಶನಿವಾರ ಇದರ ವಿಚಾರಣೆ ನಡೆಸಿದ್ದ ಪೋಕ್ಸೊ ವಿಶೇಷ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.