ADVERTISEMENT

ಕ್ರಿಪ್ಟೋಕರೆನ್ಸಿ ಹಗರಣ | ಲಡಾಖ್‌ನಲ್ಲಿ ಇದೇ ಮೊದಲ ಬಾರಿಗೆ ಇ.ಡಿ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2024, 5:39 IST
Last Updated 2 ಆಗಸ್ಟ್ 2024, 5:39 IST
<div class="paragraphs"><p>ಇ.ಡಿ</p></div>

ಇ.ಡಿ

   

ಶ್ರೀನಗರ: ಕ್ರಿಪ್ಟೋಕರೆನ್ಸಿ ಹಗರಣ ಸಂಬಂಧ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇದೇ ಮೊದಲ ಬಾರಿ ದಾಳಿ ನಡೆಸಿದ್ದಾರೆ.

ಕ್ರಿಪ್ಟೋಕರೆನ್ಸಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಲಡಾಖ್‌ನ ಲೇಹ್, ಜಮ್ಮು ಮತ್ತು ಕಾಶ್ಮೀರ, ಹರಿಯಾಣದ ಸೋನಿಪತ್‌ನಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಆಧರಿಸಿ ಇ.ಡಿ ಅಧಿಕಾರಿಗಳು ಕ್ರಿಪ್ಟೋಕರೆನ್ಸಿ ಹಗರಣದ ಆರೋಪಿ ಎ.ಆರ್. ಮಿರ್ ಮತ್ತು ಇತರರಿಗೆ ಸೇರಿದ ಆರು ಸ್ಥಳದಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

2022ರಲ್ಲಿ ಬೆಳಕಿಗೆ ಬಂದ ₹2,500 ಕೋಟಿ ಕ್ರಿಪ್ಟೋಕರೆನ್ಸಿ ಹಗರಣದ ಪ್ರಮುಖ ಆರೋಪಿ ಮಿಲಾನ್‌ ಗಾರ್ಗ್‌ನನ್ನು ಹಿಮಾಚಲ ಪ್ರದೇಶ ಪೊಲೀಸರು ಜುಲೈ 18ರಂದು ಕೋಲ್ಕತ್ತದಲ್ಲಿ ಬಂಧಿಸಿದ್ದರು.

ನಕಲಿ ಕ್ರಿಪ್ಟೋಕರೆನ್ಸಿಯ ವಿನ್ಯಾಸ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದ ಗಾರ್ಗ್‌, ಹಗರಣ ಬೆಳಕಿಗೆ ಬಂದ ಬಳಿಕ ದುಬೈಗೆ ತೆರಳಿ ತಲೆಮರೆಸಿಕೊಂಡಿದ್ದ. ಕಳೆದ ಜೂನ್‌ನಲ್ಲಿ ಈತ ಭಾರತಕ್ಕೆ ವಾಪಸಾಗಿದ್ದ. ಇದೀಗ ಮತ್ತೆ ಪರಾರಿಯಾಗಲು ಯತ್ನಿಸಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ ಎಂದು ಉತ್ತರ ವಲಯದ ಡಿಐಜಿ ಅಭಿಶೇಕ್‌ ಧುಲ್ಲಾರ್‌ ಹೇಳಿದ್ದರು.

ಬಂಧಿತ ಗಾರ್ಗ್‌, ಪ್ರಕರಣದ ಕಿಂಗ್‌ಪಿನ್‌ ಎಂದು ಗುರುತಿಸಲಾಗಿರುವ ಹಾಗೂ ಇನ್ನೂ ತಲೆಮರೆಸಿಕೊಂಡಿರುವ ಸುಬಾಶ್‌ ಶರ್ಮಾನ ಪ್ರಮುಖ ಸಹಚರನಾಗಿದ್ದಾನೆ. ಈತ ನಕಲಿ ಕ್ರಿಪ್ಟೋಕರೆನ್ಸಿಯ ವಿನ್ಯಾಸ, ಸಾಫ್ಟ್‌ವೇರ್‌ ಅಭಿವೃದ್ಧಿ ಮತ್ತು ಮಾರಾಟದಲ್ಲಿ ಸಕ್ರಿಯನಾಗಿದ್ದ.

ಹೂಡಿಕೆ ಮತ್ತು ಕ್ರಿಪ್ಟೋಕರೆನ್ಸಿ ಖರೀದಿಗೆ ಸಾವಿರಾರು ಜನರನ್ನು ವಂಚಿಸಿದ ಈ ಪ್ರಕರಣವು 2018ರಲ್ಲಿ ನಡೆದಿದೆಯಾದರೂ ವಂಚಿತರಿಗೆ ಬೆದರಿಕೆ ಹಾಕಿದ್ದರಿಂದ ಇದು 2022ರಲ್ಲಿ ಬೆಳಕಿಗೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.