ADVERTISEMENT

ರಾಮಮಂದಿರ ಸಂಕೀರ್ಣ ವಿಸ್ತರಣೆ; ಹೆಚ್ಚುವರಿ ಭೂಮಿ ಖರೀದಿ

107 ಎಕರೆಗೆ ವಿಸ್ತರಿಸಲು ಇನ್ನೂ 14 ಲಕ್ಷ ಚ.ಅಡಿಯಷ್ಟು ಭೂಮಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 6:32 IST
Last Updated 4 ಮಾರ್ಚ್ 2021, 6:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಯೋಧ್ಯೆ(ಉತ್ತರ ಪ್ರದೇಶ): ಪೂರ್ವ ಯೋಜನೆಯಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ದೇವಾಲಯ ಸಂಕೀರ್ಣ ವಿಸ್ತರಿಸುವ ಕಾರ್ಯ ಆರಂಭವಾಗಿದ್ದು, ಇದರ ಮೊದಲ ಹೆಜ್ಜೆಯಾಗಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಾಮಜನ್ಮಭೂಮಿ ಪಕ್ಕದಲ್ಲಿರುವ 7,285 ಚದರ ಅಡಿಯಷ್ಟು ಭೂಮಿಯನ್ನು ಖರೀದಿಸಿದೆ.

ರಾಮಮಂದಿರ ದೇವಾಲಯ ಸಂಕೀರ್ಣವನ್ನು 70 ಎಕರೆ ಪ್ರದೇಶದಿಂದ 107 ಎಕರೆ ಪ್ರದೇಶಕ್ಕೆ ವಿಸ್ತರಿಸಬೇಕೆಂಬ ಯೋಜನೆಗೆ ಅನುಗುಣವಾಗಿ ಅಯೋಧ್ಯೆಯ ಆಶರ್ಫಿ ಭವನದ ಪಕ್ಕದಲ್ಲಿದ್ದ 7,825 ಚ. ಅಡಿ ಭೂಮಿಯನ್ನು, ಚ.ಅಡಿಗೆ ₹1,373 ಬೆಲೆ ನೀಡಿ ಖರೀದಿಸಲಾಗಿದೆ ಎಂದು ಟ್ರಸ್ಟಿಯೊಬ್ಬರು ತಿಳಿಸಿದ್ದಾರೆ.

‘ರಾಮಮಂದಿರಕ್ಕೆ ಹೆಚ್ಚಿನ ಸ್ಥಳ ಬೇಕಾಗಿರುವುದರಿಂದ, ನಾವು ಭೂಮಿಯನ್ನು ಖರೀದಿಸಿದ್ದಾಗಿ‘ ಟ್ರಸ್ಟಿ ಅನಿಲ್‌ ಮಿಶ್ರಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಅವರ ಪರವಾಗಿ 7,285 ಚದರ ಅಡಿ ಭೂಮಿಗೆ ನೋಂದಣಿ ಪತ್ರಕ್ಕೆ ಅದರ ಮಾಲೀಕ ದೀಪ್ ನರೈನ್ ಫೆಬ್ರವರಿ 20 ರಂದು ಸಹಿ ಹಾಕಿದರು. ಮಿಶ್ರಾ ಮತ್ತು ಶಾಸಕ ಇಂದ್ರ ಪ್ರತಾಪ್ ತಿವಾರಿ ಸಾಕ್ಷಿಗಳಾಗಿ, ಫೈಜಾಬಾದ್‌ನ ಉಪನೋಂದಾಣಾಧಿಕಾರಿ ಎಸ್.ಬಿ. ಯಾರ ಕಚೇರಿಯಲ್ಲಿ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ಹೇಳಿದರು.

ಜಮೀನಿನ ಮಾಲೀಕ ದೀಪ್ ನರೈನ್ ಅವರು ಭೂಮಿಯನ್ನು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರ ಹೆಸರಿಗೆ ಫೆಬ್ರುವರಿ 20ರಂದು ನೋಂದಣೀ ಮಾಡಿಕೊಟ್ಟಿದ್ದಾರೆ. ಟ್ರಸ್ಟಿಗಳಾದ ಅನಿಲ್ ಮಿಶ್ರಾ ಮತ್ತು ಶಾಸಕ ಇಂದ್ರ ಪ್ರತಾಪ್ ತಿವಾರಿ ಅವರು ಸಾಕ್ಷಿಯಾಗಿ ಸಹಿ ಹಾಕಿದ್ದಾರೆ. ಫೈಜಾಬಾದ್‌ನ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಜಮೀನು ನೋಂದಣಿ ಪ್ರಕ್ರಿಯೆ ನಡೆದಿದೆ.

ಮೂಲಗಳ ಪ್ರಕಾರ, ಟ್ರಸ್ಟ್ ಹೆಚ್ಚಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ ಮತ್ತು ರಾಮ ಮಂದಿರ ಸಂಕೀರ್ಣದ ಪಕ್ಕದಲ್ಲಿರುವ ದೇವಾಲಯಗಳು, ಮನೆಗಳು ಮತ್ತು ಖಾಲಿ ಇರುವ ಜಮೀನಿನ ಮಾಲೀಕರೊಂದಿಗೆ ಮಾತುಕತೆ ನಡೆಸುತ್ತಿದೆ.

ಈ ಯೋಜನೆಯನ್ನು 107 ಎಕರೆಗಳಿಗೆ ವಿಸ್ತರಿಸಲು ಟ್ರಸ್ಟ್ ಬಯಸಿದೆ. ಆ ಗುರಿ ತಲುಪಲು ಇನ್ನೂ 14,30,195 ಚದರ ಅಡಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.