ನವದೆಹಲಿ: ಸಲಿಂಗ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ಮೇಲಿನ ವಾದವನ್ನು ಸುಪ್ರೀಂ ಕೋರ್ಟ್ ಇಂದಿನಿಂದ ಆಲಿಸುತ್ತಿದೆ.
ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಸ್. ಕೆ. ಕೌಲ್, ಎಸ್. ಆರ್. ಭಟ್, ಹಿಮಾ ಕೊಹ್ಲಿ ಹಾಗೂ ಪಿ. ಎಸ್. ನರಸಿಂಹ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಇದನ್ನು ಬಹಳ ಮೂಲ ಸಮಸ್ಯೆ ಎಂದು ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಮಾರ್ಚ್ 13 ರಂದು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು.
ಸೋಮವಾರ, ಸಲಿಂಗ ವಿವಾಹದ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಪ್ರಶ್ನಿಸಿ ಕೇಂದ್ರದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತ್ತು.
ಸಲಿಂಗ ವಿವಾಹವು ‘ನಗರ ಗಣ್ಯರ ಸಂಸ್ಕೃತಿ‘ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ಅಲ್ಲದೇ ಮದುವೆಗೆ ಅಂಗೀಕಾರ ನೀಡುವುದು ಶಾಸಕಾಂಗದ ಕೆಲಸವಾಗಿದ್ದು, ಕೋರ್ಟ್ ಇದರಿಂದ ಹಿಂದೆ ಸರಿಯಬೇಕು ಎಂದು ತಿಳಿಸಿತ್ತು.
ಸಲಿಂಗ ವಿವಾಹವು, ಸಾಮಾಜಿಕ ಸ್ವೀಕಾರದ ಉದ್ದೇಶಕ್ಕಾಗಿ ಕೇವಲ ನಗರ ಗಣ್ಯರ ದೃಷ್ಟಿಕೋನವಾಗಿದೆ. ಸಮರ್ಥ ಶಾಸಕಾಂಗವು ಗ್ರಾಮೀಣ, ಅರೆನಗರ ಹಾಗೂ ನಗರವಾಸಿಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು, ಧಾರ್ಮಿಕ ಪಂಗಡ, ವೈಯಕ್ತಿಕ ಕಾನೂನು, ವಿವಾಹ ಪದ್ಧತಿಗಳ ಜತೆಗೆ ಅದರ ಪರಿಣಾಮಗಳನ್ನು ಗಮನಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ವಿವಾಹವು ಸಾಮಾಜಿಕ–ನ್ಯಾಯಿಕ ಆಚರಣೆಯಾಗಿದ್ದು, ಸಂವಿಧಾನದ 26ನೇ ವಿಧಿಯನ್ವಯ ಸ್ಥಾಪಿಸಲಾದ ಶಾಸನದಿಂದ ನಿಯಂತ್ರಿಸಲ್ಪಡುವುದಾಗಿದೆ. ಜತೆಗೆ ಕಾನೂನಿನ ಪಾವಿತ್ರ್ಯತೆಯಿಂದ ಗುರುತಿಸಿ ಅನುಗ್ರಹಿಸುವುದಾಗಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ಅಲ್ಲದೇ ಅರ್ಜಿಯಲ್ಲಿ ಎತ್ತಿರುವ ಪ್ರಶ್ನೆಗಳನ್ನು ಜನಪ್ರತಿನಿಧಿಗಳ ವಿವೇಚನೆಗೆ ಬಿಡಬೇಕು ಎಂದು ಕೇಂದ್ರ ಸರ್ಕಾರವು ಅರ್ಜಿದಾರರಿಗೆ ಮನವಿ ಮಾಡಿದೆ.
ಕಳೆದ ವರ್ಷ ನವೆಂಬರ್ 25ರಂದು ಇಬ್ಬರು ಸಲಿಂಗಿ ದಂಪತಿಗಳು ತಮ್ಮ ವಿವಾಹದ ಹಕ್ಕನ್ನು ಜಾರಿಗೊಳಿಸಲು ಮತ್ತು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹಗಳನ್ನು ನೋಂದಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಪ್ರತ್ಯೇಕ ಮನವಿಗಳಿಗೆ ಸುಪ್ರೀಂ ಕೋರ್ಟ್, ಕೇಂದ್ರದಿಂದ ಪ್ರತಿಕ್ರಿಯೆ ಕೋರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.