ಮುಂಬೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮಾನವಸಹಿತ ‘ಗಗನಯಾನ’ ಯೋಜನೆಯು ಕೋವಿಡ್–19 ಪಿಡುಗಿನ ನಡುವೆಯೂ ಚುರುಕು ಪಡೆದಿದೆ.
ಲಾರ್ಸೆನ್ ಆ್ಯಂಡ್ ಟುಬ್ರೊ (ಎಲ್ ಆ್ಯಂಡ್ ಟಿ) ಕಂಪನಿಯು ಗಗನಯಾನ ಯೋಜನೆಯ ಉಡಾವಣಾ ರಾಕೆಟ್‌ನ ಮೊದಲ ಉಪಕರಣವನ್ನು(ಎಸ್–200 ಬೂಸ್ಟರ್ ಸೆಗ್ಮಂಟ್) ಇಸ್ರೊಗೆ ಹಸ್ತಾಂತರಿಸಿದೆ. ಬೂಸ್ಟರ್ ಸೆಗ್ಮೆಂಟ್ ಅನ್ನು ಮುಂಬೈನಲ್ಲಿರುವ ಎಲ್ ಆ್ಯಂಡ್ ಟಿಯ ಪೊವೈ ಏರೋಸ್ಪೇಸ್ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ. ನಿಗದಿತ ಅವಧಿಗೂ ಮೊದಲೇ ಬೂಸ್ಟರ್‌ನ ಮಧ್ಯಭಾಗವನ್ನು ತಯಾರಿಸಲಾಗಿದೆ. ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್, ಎಲ್ ಆ್ಯಂಡ್ ಟಿ ಮಂಡಳಿಯ ನಿರ್ದೇಶಕ ಜಯಂತ್ ಪಾಟಿಲ್ ಅವರು ಆನ್‌ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಇದರ ರವಾನೆಗೆ ಹಸಿರು ನಿಶಾನೆ ತೋರಿದರು.
ಗಗನಯಾನ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಎಲ್ ಆ್ಯಂಡ್ ಟಿ, ಚಂದ್ರಯಾನ ಹಾಗೂ ಮಂಗಳಯಾನ ಯೋಜನೆಗಳಿಗೂ ಹಲವು ಉಪಕರಣಗಳನ್ನು ನಿರ್ಮಿಸಿದೆ. ಪ್ರಸ್ತುತ ನಿರ್ಮಿಸಿರುವ ಬೂಸ್ಟರ್ ಸೆಗ್ಮೆಂಟ್, 3.2 ಮೀ ವ್ಯಾಸ, 8.5 ಮೀ ಉದ್ದವಿದ್ದು 5.5 ಟನ್ ತೂಕವಿದೆ.
‘ಗುಣಮಟ್ಟದ ಎಲ್ಲ ಮಾನದಂಡಗಳನ್ನು ಪಾಲಿಸಿಕೊಂಡು ಎರಡೂ ತಂಡಗಳು ನಿರಂತರವಾಗಿ ಕಾರ್ಯನಿರ್ವಹಿಸಿನಿಗದಿತ ಅವಧಿಯೊಳಗೇ ಇದನ್ನು ಸಾಧಿಸಿದೆ’ ಎಂದು ಶಿವನ್ ಶ್ಲಾಘಿಸಿದರು. ‘ಮಹತ್ತರವಾದ ಗಗನಯಾನ ಯೋಜನೆಗೆ ಇಸ್ರೊ ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಹೆಮ್ಮೆ ಇದೆ. ಐದು ದಶಕದಿಂದ ಇಸ್ರೊ ಜೊತೆಗೆ ಎಲ್ ಆ್ಯಂಡ್ ಟಿ ಕಾರ್ಯನಿರ್ವಹಿಸುತ್ತಿದ್ದು, ಜೊತೆಯಾಗಿ ರಾಷ್ಟ್ರದ ಮಹತ್ವಾಕಾಂಕ್ಷೆಯನ್ನು ಈಡೇರಿಸುತ್ತೇವೆ’ ಎಂದು ಪಾಟಿಲ್ ತಿಳಿಸಿದರು.
‘ಗಗನಯಾನ ಯೋಜನೆಗೆ ಗಗನಯಾನಿಗಳನ್ನು ಹೊತ್ತೊಯ್ಯಲು ಜಿಎಸ್‌ಎಲ್‌ವಿ ಮಾರ್ಕ್–3 ರಾಕೆಟ್ ಬಳಸಲು ನಿರ್ಧರಿಸಲಾಗಿದೆ. ಈ ರಾಕೆಟ್‌ಗೆ ಎಸ್–200 ಉತ್ಕೃಷ್ಟ ಬೂಸ್ಟರ್ ಆಗಿ ಕಾರ್ಯನಿರ್ವಹಿಸಲಿದೆ’ ಎಂದು ಪ್ರಕಟಣೆಯಲ್ಲಿ ಎಲ್ ಆ್ಯಂಡ್ ಟಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.