ನವದೆಹಲಿ: ರಾಜ್ಯಗಳ ವಿಧಾನಸಭೆಗಳು ಹಾಗೂ ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಉದ್ದೇಶದ ‘ಒಂದು ದೇಶ– ಒಂದು ಚುನಾವಣೆ’ಯ ಕಾರ್ಯಸಾಧ್ಯತೆ ಪರಿಶೀಲನೆಗಾಗಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಸಮಿತಿಯು ಇಂದು ಸಭೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದೆಹಲಿಯಲ್ಲಿರುವ ಕೋವಿಂದ್ ನಿವಾಸದಲ್ಲಿ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ‘ಒಂದು ದೇಶ– ಒಂದು ಚುನಾವಣೆ’ಯ ಕಾರ್ಯಸಾಧ್ಯತೆ ಪರಿಶೀಲನೆಗಾಗಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು.
ಸಮಿತಿ ಸದಸ್ಯರ ಕುರಿತ ವಿವರಗಳು ಬಹಿರಂಗವಾಗಿಲ್ಲ. ಕೇಂದ್ರದ ಈ ನಡೆಯು ಅವಧಿಪೂರ್ಣಗೊಳ್ಳುವ ಮುನ್ನವೇ ಲೋಕಸಭಾ ಚುನಾವಣೆ ಘೋಷಿಸುವ ಸಾಧ್ಯತೆ ಕುರಿತ ಚರ್ಚೆಗೆ ಕಾರಣವಾಗಿದೆ.
ಸಮಿತಿ ರಚಿಸಿದ ಬೆನ್ನಲ್ಲೇ, ‘ಒಂದು ದೇಶ–ಒಂದು ಚುನಾವಣೆ’ ಕುರಿತು ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಬಿಜೆಪಿ ನೇತೃತ್ವದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ನಾಯಕರು ಈ ನಿರ್ಧಾರವನ್ನು ಸ್ವಾಗತಿಸಿದ್ದರೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೇಂದ್ರದ ನಡೆಯನ್ನು ಟೀಕಿಸಿವೆ.
1967ರ ವರೆಗೆ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲಾಗುತ್ತಿತ್ತು. ಇದೇ ಮಾದರಿಯಲ್ಲಿ ಈಗ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಸಾಧ್ಯವೇ? ಈ ನಿಟ್ಟಿನಲ್ಲಿ ಅನುಸರಿಸಬೇಕಿರುವ ವಿಧಾನ ಕಾರ್ಯಸಾಧುವೇ ಎಂಬ ಬಗ್ಗೆ ಕೋವಿಂದ್ ಅವರು ಪರಿಶೀಲಿಸುವರು ಎಂದು ಮೂಲಗಳು ಹೇಳಿವೆ.
ಈ ವಿಷಯ ಕುರಿತು ಅವರು ವಿವಿಧ ರಾಜಕೀಯ ಪಕ್ಷಗಳು ಹಾಗೂ ತಜ್ಞರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವ ನಿರೀಕ್ಷೆ ಇದೆ ಎಂದು ಇವೇ ಮೂಲಗಳು ಹೇಳಿವೆ.
ಸೆಪ್ಟೆಂಬರ್ 18ರಿಂದ 22ರ ವರೆಗೆ ಸಂಸತ್‌ನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದ ಮರು ದಿನವೇ ‘ಒಂದು ದೇಶ ಒಂದು ಚುನಾವಣೆ’ ಕುರಿತ ಸಮಿತಿ ರಚಿಸಲಾಗಿದೆ. ವಿಶೇಷ ಅಧಿವೇಶನದ ಕಾರ್ಯಸೂಚಿ ಇನ್ನೂ ಗೌಪ್ಯವಾಗಿಯೇ ಇದೆ.
2014ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಸಂಸ್ಥೆಗಳು ಸೇರಿದಂತೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಬೇಕು ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.
ನಿರಂತರವಾಗಿ ಚುನಾವಣೆಗಳು ನಡೆಯುವುದರಿಂದ ಅಪಾರ ಹಣ ವ್ಯಯವಾಗಿ, ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದರಿಂದ ಈ ಎಲ್ಲ ತೊಂದರೆ ತಪ್ಪಿಸಬಹುದು ಎಂಬ ಕಾರಣಗಳನ್ನು ಮೋದಿ ನೀಡುತ್ತಿದ್ದಾರೆ.
2017ರಲ್ಲಿ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಕೋವಿಂದ್ ಅವರು ಕೂಡ ಮೋದಿ ಅವರ ನಿಲುವನ್ನು ಬೆಂಬಲಿಸಿದ್ದರು. ಪದೇ ಪದೇ ಚುನಾವಣೆಗಳು ನಡೆಯುವುದರಿಂದ ಆಗುವ ತೊಂದರೆಗಳ ಬಗ್ಗೆ 2018ರಲ್ಲಿ ಸಂಸತ್ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ವೇಳೆ ಪ್ರಸ್ತಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.