ಗುರುಗ್ರಾಮ: 34ನೇ ಸಿಆರ್‌ಪಿಎಫ್‌ನ ಮೊದಲ ಮಹಿಳಾ ತಂಡವನ್ನು ಶನಿವಾರ ವಿಶೇಷ ಜಂಗಲ್ ವಾರ್‌ಫೇರ್ ಕಮಾಂಡೊ ಪಡೆ ‘ಕೋಬ್ರಾ‘ಗೆ(ಕಮಾಂಡೊ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಕ್ಷನ್) ಸೇರಿಸಲಾಯಿತು.
ಇಲ್ಲಿನ ಕಡರ್‌ಪುರದಲ್ಲಿರುವ ಸಿಆರ್‌ಪಿಎಫ್ ಶಿಬಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಹಿಳೆಯರು ನಡೆಸಿದ ಯುದ್ಧಸಮರ ಕಸರತ್ತನ್ನು ಸಿಆರ್‌ಪಿಎಫ್ ಮಹಾನಿರ್ದೇಶಕಿ ಎ ಪಿ ಮಹೇಶ್ವರಿ ವೀಕ್ಷಿಸಿದರು.
‘ಈಗಿರುವ ಆರು ಸಿಆರ್‌ಪಿಎಫ್ ಮಹಿಳಾ ಬೆಟಾಲಿಯನ್‌ಗಳಿಂದ ಮಹಿಳೆಯರನ್ನು ಕೋಬ್ರಾ ಪಡೆಗೆ ಆಯ್ಕೆ ಮಾಡಲಾಗಿದೆ. ಇವರೆಲ್ಲರೂ ಮೂರು ತಿಂಗಳ ಕಾಲ ಪೂರ್ವಭಾವಿ ತರಬೇತಿ ಪಡೆಯಲಿದ್ದಾರೆ. ನಂತರ ನಕ್ಸಲ್ ಪೀಡಿತ ಜಿಲ್ಲೆಗಳಾದ ಸುಕ್ಮಾ ದಾಂತೇವಾಡ ಮತ್ತು ಬಿಜಾಪುರಗಳಲ್ಲಿ ನಿಯೋಜಿಸಲಾಗಿರುವ ಕೋಬ್ರಾ ಘಟಕಗಳನ್ನು ಸೇರ್ಪಡೆಗೊಳ್ಳುತ್ತಾರೆ‘ ಎಂದು ವಕ್ತಾರರು ತಿಳಿಸಿದ್ದಾರೆ.
2009ರಲ್ಲಿ ಕೇಂದ್ರೀಯ ಮೀಸಲು ಪಡೆ (ಸಿಆರ್‌ಪಿಎಫ್) ಅಡಿಯಲ್ಲಿ ಗುಪ್ತಚರ ಆಧಾರಿತ ಅರಣ್ಯದಲ್ಲಿ ಯುದ್ಧ ಕಾರ್ಯಾ ಚರಣೆ ನಡೆಸಲು ಕೋಬ್ರಾ ಪಡೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಇಲ್ಲಿವರೆಗೂ ಈ ಘಟಕದಲ್ಲಿ ಪುರುಷ ಸೈನಿಕರು ಕಾರ್ಯನಿರ್ವಹಿಸುತ್ತಿದ್ದರು. ಇದೇ ಮೊದಲ ಬಾರಿಗೆ ಮಹಿಳಾ ಪಡೆಯನ್ನು ಸೇರಿಸಲಾಗಿದೆ.
ಮಾನಸಿಕ ಹಾಗೂ ದೈಹಿಕವಾಗಿ ಗಟ್ಟಿಯಾದ ಗುಣಲಕ್ಷಣಗಳನ್ನು ಹೊಂದಿರುವ ಕೋಬ್ರಾ ಪಡೆಯ ಯೋಧರನ್ನು, ದೇಶದ ಮಾವೊವಾದಿ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.