ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಬಗ್ಗೆ ಅದೇ ಪಕ್ಷದ ಐವರು ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿಗೆ ಪತ್ರ ಬರೆದಿದ್ದಾರೆ.
ಮತದಾರರ ಪಟ್ಟಿ ರೂಪಿಸುವ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗಳ ವಿವರವನ್ನು ಎಲ್ಲ ಮತದಾರರಿಗೆ ಮತ್ತು ಸಂಭಾವ್ಯ ಅಭ್ಯರ್ಥಿಗಳಿಗೆ ಒದಗಿಸುವಂತೆ ಸಂಸದರು ಮನವಿ ಮಾಡಿದ್ದಾರೆ.
ಅಭ್ಯರ್ಥಿಯನ್ನು ನಾಮ ನಿರ್ದೇಶನ ಮಾಡಲು ಹಾಗೂ ಮತ ಚಲಾಯಿಸಲು ಯಾರು ಅರ್ಹರು ಎಂಬುದನ್ನು ಪರಿಶೀಲಿಸುವುದಕ್ಕಾಗಿ ಪಟ್ಟಿಯನ್ನು ಎಲ್ಲರಿಗೂ ದೊರೆಯುವಂತೆ ಮಾಡಬೇಕು ಎಂದು ಸೆಪ್ಟೆಂಬರ್ 6ರಂದು ಬರೆಯಲಾದ ಜಂಟಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಂಸದರಾದ ಶಶಿ ತರೂರ್, ಮನೀಷ್ ತಿವಾರಿ, ಕಾರ್ತಿ ಚಿದಂಬರಂ, ಪ್ರದ್ಯೂತ್ ಬೋರ್‌ದೊಲೊಯಿ ಹಾಗೂ ಅಬ್ದುಲ್ ಖಾಲಿಕ್ ಪತ್ರ ಬರೆದಿದ್ದಾರೆ.
ಮತದಾರರ ಪಟ್ಟಿ ಪರಿಶೀಲನೆಗಾಗಿ ಮತದಾರರು ಮತ್ತು ಅಭ್ಯರ್ಥಿಗಳು ಎಲ್ಲ 28 ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡುವುದು ಸಾಧ್ಯವಾಗದು ಎಂದು ಸಂಸದರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮತದಾರರ ಪಟ್ಟಿ ಬಿಡುಗಡೆ ಮಾಡಬೇಕೆಂಬ ನಮ್ಮ ಬೇಡಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿರುವುದು ದುರದೃಷ್ಟಕರ. ಪಕ್ಷದ ಆಂತರಿಕ ದಾಖಲೆಯನ್ನು ಬಿಡುಗಡೆ ಮಾಡಬೇಕೆಂದು ನಾವು ಹೇಳಿಲ್ಲ. ಅದರಿಂದ ದುರುಪಯೋಗಕ್ಕೆ ಅವಕಾಶವಾಗಬಹುದು ಎಂಬುದು ನಮಗೂ ತಿಳಿದಿದ ಎಂಬುದಾಗಿ ಸಂಸದರು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದೆ ಎಂದು ಪಕ್ಷವು ಈಗಾಗಲೇ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.