ನವದೆಹಲಿ/ಲೇಹ್: ಯುದ್ಧ ತಾಲೀಮು ನಡೆಸುತ್ತಿದ್ದ ಐವರು ಯೋಧರು ಶ್ಯೋಕ್ ನದಿಯಲ್ಲಿ ಕೊಚ್ಚಿಹೋದ ಘಟನೆ ಪೂರ್ವ ಲಡಾಖ್‌ನಲ್ಲಿ ನಡೆದಿದೆ. ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
‘ಲಡಾಖ್‌ನ ಶ್ಯೋಕ್ ನದಿ ದಾಟುವಾಗ ಭಾರತೀಯ ಸೇನೆಯ ಟ್ಯಾಂಕ್ ಕೊಚ್ಚಿ ಹೋಗಿದ್ದು, ಐವರು ಧೈರ್ಯಶಾಲಿ ಯೋಧರು ಸಾವಿಗೀಡಾಗಿರುವ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ. ಮೃತ ಯೋಧರ ಕುಟುಂಬಸ್ಥರಿಗೆ ನನ್ನ ಸಂತಾಪಗಳು. ಈ ದುಃಖದ ಸಮಯದಲ್ಲಿ ನಮ್ಮ ವೀರ ಸೈನಿಕರ ಅನುಕರಣೀಯ ಸೇವೆಗೆ ದೇಶವು ಒಟ್ಟಾಗಿ ನಿಂತಿದೆ’ ಎಂದು ಖರ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಯೋಧರ ಸಾವಿನ ಸುದ್ದಿ ಅತ್ಯಂತ ದುಃಖ ತಂದಿದೆ. ಯೋಧರ ಕುಟುಂಬಸ್ಥರಿಗೆ ನನ್ನ ಸಂತಾಪಗಳು. ಈ ದುಃಖದ ಸಮಯದಲ್ಲಿ ನಾವು ಅವರೊಂದಿಗೆ ನಿಲ್ಲುತ್ತೇವೆ. ಯೋಧರ ಸಮರ್ಪಣೆ, ಸೇವೆ ಮತ್ತು ತ್ಯಾಗವನ್ನು ದೇಶವು ಯಾವಾಗಲೂ ಸ್ಮರಿಸುತ್ತದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಲಡಾಖ್‌ನಲ್ಲಿ ಐವರು ಸೈನಿಕರು ಹುತಾತ್ಮರಾದ ಸುದ್ದಿ ಅತ್ಯಂತ ದುಃಖಕರವಾಗಿದೆ. ದೇವರು ಅಗಲಿದ ಆತ್ಮಗಳಿಗೆ ಶಾಂತಿ ನೀಡಲಿ. ದುಃಖತಪ್ತ ಕುಟುಂಬಸ್ಥರಿಗೆ ನನ್ನ ಸಂತಾಪಗಳು’ ಎಂದು ಪ್ರಿಯಾಂಕಾ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಘಟನೆ ನಡೆದ ಕೂಡಲೇ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ನೀರಿನ ರಭಸ ವಿಪರೀತವಾಗಿದ್ದರಿಂದ ಸೈನಿಕರ ಜೀವ ಉಳಿಸಲು ಸಾಧ್ಯವಾಗಲಿಲ್ಲ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಹಿಮಗಡ್ಡೆಗಳು ಕರಗುತ್ತಿರುವುದರಿಂದ ಶ್ಯೋಕ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.