ನವದೆಹಲಿ: ಐದು ರಾಜ್ಯಗಳ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ವಿವಿಧ ವಿದ್ಯುನ್ಮಾನ ಮಾಧ್ಯಮಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದೆ. ತೆಲಂಗಾಣ ಹಾಗೂ ಛತ್ತೀಸಗಢ ರಾಜ್ಯಗಳ ಮತದಾರರು ಕಾಂಗ್ರೆಸ್ ಪಕ್ಷವನ್ನು ಗದ್ದುಗೆಯ ಸನಿಹಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ‘ಕೈ’ ಪಾಳಯದ ಪ್ರಬಲ ಸ್ಪರ್ಧೆಯ ನಡುವೆಯೂ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ‘ಭವಿಷ್ಯ’ ನುಡಿದಿವೆ.
ಐದು ರಾಜ್ಯಗಳಿಗೆ ನವೆಂಬರ್ 7 ರಿಂದ 30 ರ ನಡುವೆ ಮತದಾನ ನಡೆದಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಮತಗಟ್ಟೆ ಸಮೀಕ್ಷೆಯನ್ನು ಆಧರಿಸಿದ ಸಂಭಾವ್ಯ ಫಲಿತಾಂಶವನ್ನು 9ಕ್ಕೂ ಹೆಚ್ಚು ಸಂಸ್ಥೆಗಳು ಗುರುವಾರ ಸಂಜೆ ಪ್ರಕಟಿಸಿದವು.
ಲೋಕಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಉಳಿದಿದ್ದು, ಐದು ರಾಜ್ಯಗಳ ಚುನಾವಣೆಯನ್ನು ಕಾಂಗ್ರೆಸ್, ಬಿಜೆಪಿ ಹಾಗೂ ಕೆ.ಚಂದ್ರಶೇಖರ ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮತ್ತು ಪ್ರಾದೇಶಿಕ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದವು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಚಂದ್ರಶೇಖರ ರಾವ್, ಮತ್ತಿತರ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದರು.
ಮಧ್ಯಪ್ರದೇಶದಲ್ಲಿ ಬಿಜೆಪಿಯು ‘ಅಭೂತಪೂರ್ವ’ (140ಕ್ಕೂ ಅಧಿಕ ಸ್ಥಾನ) ಜಯ ಗಳಿಸಲಿದೆ ಎಂದು ‘ಇಂಡಿಯಾ ಟುಡೇ’ ಹಾಗೂ ‘ಟುಡೇಸ್ ಚಾಣಕ್ಯ’ ಸಮೀಕ್ಷೆ ತಿಳಿಸಿವೆ. ಸಿ ವೋಟರ್, ಟೈಮ್ಸ್ ನೌ ಹಾಗೂ ಟಿವಿ 9 ಭಾರತವರ್ಷ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಕಮಲ ಪಡೆ ಕೊಂಚ ಮೇಲುಗೈ ಸಾಧಿಸಿದೆ ಎಂದು ಕೆಲ ಸಮೀಕ್ಷೆಗಳು ಹೇಳಿವೆ.
ರಾಜಸ್ಥಾನದಲ್ಲಿ ಕಮಲ ಪಡೆಯು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ. ಛತ್ತೀಸಘಡದಲ್ಲಿ ಕೈ ಪಾಳಯವು ಸರಳ ಬಹುಮತ ಗಳಿಸಲಿದೆ. ಆದರೆ, ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ ಎಂಬುದು ಎಲ್ಲ ಸಮೀಕ್ಷೆಗಳ ಸಾರ.
’ತೆಲಂಗಾಣದಲ್ಲಿ 10 ವರ್ಷಗಳ ಬಿಆರ್‌ಎಸ್ ಆಡಳಿತ ಕೊನೆಗೊಳ್ಳಲಿದೆ. ಸರ್ಕಾರ ರಚನೆಗೆ ಬೇಕಿರುವ ಸ್ಥಾನಗಳನ್ನು ಕಾಂಗ್ರೆಸ್ ಗಳಿಸಲಿದೆ’ ಎಂದು ಹೆಚ್ಚಿನ ಸಮೀಕ್ಷೆಗಳು ತಿಳಿಸಿವೆ.
ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಅತಂತ್ರ ಫಲಿತಾಂಶದ ಸುಳಿವು ಸಿಕ್ಕಿದೆ. ಜೋರಾಂ ಪೀಪಲ್ಸ್ ಮೂವ್‌ಮೆಂಟ್ (ಜೆಡ್‌ಪಿಎಂ) ಹಾಗೂ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ನಿಕಟ ಸ್ಪರ್ಧೆ ಏರ್ಪಟ್ಟಿದೆ. ರಾಜ್ಯದಲ್ಲಿ ‘ಕಿಚಡಿ’ ಸರ್ಕಾರ ರಚನೆಯಾಗಬಹುದು ಎಂದು ಸಮೀಕ್ಷೆಗಳು ತಿಳಿಸಿವೆ.
ಮಧ್ಯಪ್ರದೇಶದಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದರೆ, ಕಾಂಗ್ರೆಸ್ ಪಕ್ಷವು ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಆಡಳಿತ ನಡೆಸುತ್ತಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ 10 ವರ್ಷಗಳಿಂದ ಅಧಿಕಾರದಲ್ಲಿದೆ ಮತ್ತು ಮಿಜೋರಾಂನಲ್ಲಿ ಎಂಎನ್‌ಎಫ್ ಸರ್ಕಾರ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.