ADVERTISEMENT

ಸಿಎಂ ಅಭ್ಯರ್ಥಿ ಇಲ್ಲದೇ ಚುನಾವಣೆ ಎದುರಿಸುವ ಹಳೇ ಸಂಪ್ರದಾಯಕ್ಕೆ ಕಾಂಗ್ರೆಸ್‌ ಮೊರೆ

ಐಎಎನ್ಎಸ್
Published 9 ಜನವರಿ 2022, 12:58 IST
Last Updated 9 ಜನವರಿ 2022, 12:58 IST
   

ನವದೆಹಲಿ: ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದೇ ಚುನಾವಣೆ ಎದುರಿಸುವ ತನ್ನ ಹಳೇ ಸಂಪ್ರದಾಯವನ್ನು ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಪಾಲಿಸುತ್ತಿದೆ. ಪಂಜಾಬ್‌ನಲ್ಲಿ ಪಕ್ಷವೇ ಅಧಿಕಾರದಲ್ಲಿದ್ದರೂ, ಹಾಲಿ ಮುಖ್ಯಮಂತ್ರಿಯನ್ನು ಮುಂದಿನ ಸಿಎಂ ಅಭ್ಯರ್ಥಿನ್ನಾಗಿ ಕಾಂಗ್ರೆಸ್‌ ಬಿಂಬಿಸುತ್ತಿಲ್ಲ.

ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಫಲಿತಾಂಶದ ನಂತರವಷ್ಟೇ ನಿರ್ಧಾರವಾಗಲಿದೆ. ಹೈಕಮಾಂಡ್ ಒಪ್ಪಿಗೆ ಮೇರೆಗೆ ಹೊಸ ನಾಯಕರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷ ನಿರ್ಧರಿಸಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ, ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಸಂಪ್ರದಾಯ ಹೊಂದಿಲ್ಲ.

ಪಂಜಾಬ್ ಮತ್ತು ಉತ್ತರಾಖಂಡದ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕೆಂಬ ನಿಲುವು ಹೊಂದಿದ್ದಾರೆ. ಉತ್ತರಾಖಂಡದ ಮಾಜಿ ಸಿಎಂ ಹರೀಶ್ ರಾವತ್ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಬೆಂಬಲಿಗರು ನಾಯಕತ್ವವನ್ನು ಘೋಷಿಸಬೇಕೆಂದು ಬಯಸಿದ್ದಾರೆ. ಆದರೆ ಬಣ ರಾಜಕೀಯಕ್ಕೆ ಆಸ್ಪದ ನೀಡುವ ಆಪಾಯವನ್ನು ಪಕ್ಷ ತಂದುಕೊಳ್ಳುವುದಿಲ್ಲ ಎಂದು ಮೂಲಗಳು ಹೇಳಿವೆ.

ADVERTISEMENT

ಪಂಜಾಬ್‌ನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವುದು ಮತ್ತು ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿಗೆ ಕಠಿಣ ಸವಾಲೊಡ್ಡುವ ಅನಿವಾರ್ಯತೆ ಕಾಂಗ್ರೆಸ್‌ ಎದುರಿಗಿದೆ.

ಉತ್ತರ ಪ್ರದೇಶವನ್ನು ಹೊರತುಪಡಿಸಿ, ಮೂರು ರಾಜ್ಯಗಳಲ್ಲಿ ಪಕ್ಷವು ಬಿಜೆಪಿಯೊಂದಿಗೆ ನೇರ ಸ್ಪರ್ಧೆ ಹೊಂದಿದೆ. ಪಂಜಾಬ್‌ನಲ್ಲಿ ಅದು ಅಕಾಲಿದಳ-ಬಿಎಸ್‌ಪಿ ಮತ್ತು ಆಮ್ ಆದ್ಮಿ ಪಕ್ಷವನ್ನು ಎದುರಿಸಬೇಕಾಗಿದೆ.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಅಷ್ಟಾಗಿ ಪೈಪೋಟಿ ನೀಡುವುದಿಲ್ಲವಾದರೂ, ಚುನಾವಣೆಯಲ್ಲಿ ಬಿಎಸ್‌ಪಿಗಿಂತ ಉತ್ತಮ ಸಾಧನೆ ಮಾಡಬೇಕೆಂಬ ಇರಾದೆ ಹೊಂದಿದೆ.

ಗೋವಾದಲ್ಲಿ ಕಾಂಗ್ರೆಸ್ ಬಿಕ್ಕಟ್ಟನ್ನು ಎದುರಿಸುತ್ತಿದೆ, ಅಲ್ಲಿ ಬಹುತೇಕ ಎಲ್ಲಾ ಶಾಸಕರು ಪಕ್ಷವನ್ನು ತೊರೆದಿದ್ದಾರೆ. ಆದರೂ, ಮೂವರು ಮಾಜಿ ಸಿಎಂಗಳು ಪಕ್ಷದಲ್ಲೆ ಉಳಿದುಕೊಂಡಿದ್ದಾರೆ. ದಿಗಂಬರ್ ಕಾಮತ್, ಪ್ರತಾಪ್ ಸಿಂಗ್ ರಾಣೆ, ಫ್ರಾನ್ಸಿಸ್ಕೊ... ಈ ಮೂವರಲ್ಲಿ ಯಾರನ್ನೂ ಚುನಾವಣೆಗೆ ಮುನ್ನ ಸಿಂಎ ಅಭ್ಯರ್ಥಿ ಎಂದು ಘೋಷಿಸದಿರಲು ಕಾಂಗ್ರೆಸ್‌ ನಿರ್ಧರಿದೆ.

ಮಣಿಪುರದಲ್ಲೂ ಕಾಂಗ್ರೆಸ್‌ಗೆ ಚುನಾವಣೆಗೂ ಮುನ್ನವೇ ವಲಸೆ ಸಮಸ್ಯೆ ಎದುರಾಗಿದೆ. ಆದರೆ ಅಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಅವರಿಗೆ ಮತ್ತೊಮ್ಮೆ ಅವಕಾಶ ಸಿಗುವುದು ಖಚಿತವಾದರೂ, ಚುನಾವಣೆಗೆ ಮುನ್ನ ಘೋಷಣೆ ಮಾಡುತ್ತಿಲ್ಲ. ಪಕ್ಷವು ಈಶಾನ್ಯ ರಾಜ್ಯಗಳತ್ತ ವಿಶೇಷ ಗಮನ ನೀಡುತ್ತಿದೆ. ವೀಕ್ಷಕರಾಗಿ ಜೈರಾಮ್ ರಮೇಶ್ ಅವರನ್ನು ಕಾಂಗ್ರೆಸ್‌ ನೇಮಿಸಿದೆ. ಮಣಿಪುರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ, ಸರ್ಕಾರ ರಚಿಸುವಲ್ಲಿ ವಿಫಲವಾಗಿತ್ತು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಇರುವ ಬಹುದೊಡ್ಡ ಶಕ್ತಿ ಎಂದರೆ ಪ್ರಿಯಾಂಕಾ ಗಾಂಧಿ ವಾದ್ರಾ. ಆದರೂ, ಅವರನ್ನೂ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಸಾಧ್ಯತೆಗಳು ಕಾಂಗ್ರೆಸ್‌ ವಲಯದಲ್ಲಿ ಕಾಣಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.