ADVERTISEMENT

ಸಿಕ್ಕಿಂನಲ್ಲಿ ಮೇಘಸ್ಪೋಟ: 10 ಸಾವು

ಕೊಚ್ಚಿ ಹೋದ ಸೇತುವೆಗಳು, 23 ಸೇನಾ ಸಿಬ್ಬಂದಿ ನಾಪತ್ತೆ

ಪಿಟಿಐ
Published 4 ಅಕ್ಟೋಬರ್ 2023, 16:16 IST
Last Updated 4 ಅಕ್ಟೋಬರ್ 2023, 16:16 IST
ಪ್ರವಾಹದ ಹಿನ್ನೆಲೆಯಲ್ಲಿ ಸಿಕ್ಕಿಂನ ಮುಗುಥಾಂಗ್‌ ನಿವಾಸಿಗಳನ್ನು ವಾಹನದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಎಎಫ್‌ಪಿ ಚಿತ್ರ 
ಪ್ರವಾಹದ ಹಿನ್ನೆಲೆಯಲ್ಲಿ ಸಿಕ್ಕಿಂನ ಮುಗುಥಾಂಗ್‌ ನಿವಾಸಿಗಳನ್ನು ವಾಹನದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಎಎಫ್‌ಪಿ ಚಿತ್ರ     

ಗ್ಯಾಂಗ್ಟಕ್‌ (ಪಿಟಿಐ): ಉತ್ತರ ಸಿಕ್ಕಿಂನ ಹ್ಲೋನಕ್ ಸರೋವರದ ಮೇಲೆ ಮೇಘಸ್ಫೋಟದಿಂದ ತೀಸ್ತಾ ನದಿ ‌ಜಲಾನಯನ ಪ್ರದೇಶದಲ್ಲಿ ಹಠಾತ್‌ ಪ್ರವಾಹ ಉಂಟಾಗಿ ಬುಧವಾರ 10 ಮಂದಿ ಮೃತಪಟ್ಟಿದ್ದಾರೆ. 22 ಸೇನಾ ಸಿಬ್ಬಂದಿ ಸೇರಿದಂತೆ 82 ಮಂದಿ ನಾಪತ್ತೆಯಾಗಿದ್ದಾರೆ.

ಅನೇಕ ಪ್ರದೇಶಗಳು ಜಲಾವೃತ ಗೊಂಡಿವೆ. ಸೇತುವೆಗಳು, ಹೆದ್ದಾರಿಗಳು ಕೊಚ್ಚಿ ಹೋಗಿದ್ದು, ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಜನರನ್ನು ಸುರಕ್ಷಿತ ಸ್ಥಳಕ್ಕೆ
ಸ್ಥಳಾಂತರಿಸಲಾಗಿದೆ. ನಾಪತ್ತೆಯಾಗಿರುವ ಸಿಬ್ಬಂದಿ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. 

ADVERTISEMENT

ಮಂಗಳವಾರ ಮಧ್ಯರಾತ್ರಿ 1.30ರ ಸುಮಾರಿಗೆ ಪ್ರವಾಹ ಆರಂಭವಾಗಿದ್ದು, ಚುಂಗ್‌ತಾಂಗ್‌ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.  

ಸಿಂಗ್‌ತಮ್‌ನಲ್ಲಿರುವ ‘ಇಂದ್ರೇನಿ’ ಉಕ್ಕಿನ ಸೇತುವೆ ತೀಸ್ತಾ ನದಿ ನೀರಿನಿಂದ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ‌ಈ ದುರಂತವನ್ನು ಸಿಕ್ಕಿಂ ಸರ್ಕಾರ ವಿಪತ್ತು ಎಂದು ಘೋಷಿ ಸಿದೆ. ಗೋಲಿಟಾರ್ ಮತ್ತು ಸಿಂಗ್‌ತಮ್‌ ಪ್ರದೇಶದಲ್ಲಿ ಈವರೆಗೂ ಐದು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಗ್ಯಾಂಗ್ಟಕ್‌ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮಹೇಂದ್ರ ಚೆಟ್ರಿ ತಿಳಿಸಿದ್ದಾರೆ. 

ಚುಂಗ್‌ತಾಂಗ್‌ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿದ್ದರಿಂದ ನೀರಿನ ಮಟ್ಟವು 15-20 ಅಡಿ ಎತ್ತರಕ್ಕೆ ಏರಿದೆ. 22 ಸೇನಾ ಸಿಬ್ಬಂದಿ, 47 ನಾಗರಿಕರು ಕಾಣೆಯಾಗಿದ್ದಾರೆ. ಯೋಧ ಸೇರಿದಂತೆ 166 ಮಂದಿಯನ್ನು ಈವರೆಗೂ ರಕ್ಷಿಸಲಾಗಿದೆ. 41 ವಾಹನಗಳು ಕೆಸರಿನ ಅಡಿ ಮುಳುಗಿವೆ. ಸಂಪರ್ಕ ಕಡಿತದಿಂದಾಗಿ ನಾಪತ್ತೆಯಾದ ಸಿಬ್ಬಂದಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ತಿಳಿಸಿದ್ದಾರೆ. 

ರಾಯ್‌ಗಂಜ್‌ ಜಿಲ್ಲೆಯ ಸ್ವರ್ಣ ದ್ವೀಪ್‌ ಮಜುಂದಾರ್, ಶ್ರೀಕಾಂತ್ ಮಜುಂದಾರ್ ಹಾಗೂ ಜಾರ್ಖಂಡ್‌ನ ಇಶಾನ್ ಎಂಬ ಯುವಕರು ಸಿಕ್ಕಿಂನಲ್ಲಿ ಬುಧವಾರ ನಾಪತ್ತೆಯಾಗಿದ್ದಾರೆ ಎಂದು ನೆರೆಯ ಪಶ್ಚಿಮ ಬಂಗಾಳದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಮೂವರು ಶನಿವಾರ ಮೋಟಾರ್ ಸೈಕಲ್‌ನಲ್ಲಿ ಸಿಕ್ಕಿಂಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆಯಿಂದ ಅವರ ಮೊಬೈಲ್ ನಂಬರ್‌ಗಳ ಸಂಪರ್ಕ ಸಾಧ್ಯವಾಗದ ಕಾರಣ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಸಹಾಯಕ್ಕಾಗಿ ಸಿಕ್ಕಿಂ ಪೊಲೀಸರನ್ನು ಸಂಪರ್ಕಿಸಿದ್ದೇವೆ’ ಎಂದು ರಾಯ್‌ಗಂಜ್‌ನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರವಾಹದಿಂದ ತೀಸ್ತಾ ಜಲಾನಯನ ಪ್ರದೇಶದಲ್ಲಿರುವ ದಿಕ್ಚು, ಸಿಂಗ್‌ತಮ್‌ ಮತ್ತು ರಂಗ್ಪೋ ಸೇರಿದಂತೆ ಹಲವಾರು ಪಟ್ಟಣಗಳು ಬಾಧಿತವಾಗಿವೆ.

ಸಿಕ್ಕಿಂ ಮತ್ತು ದೇಶದ ಇತರ ಭಾಗಗಳ ನಡುವಿನ ಮುಖ್ಯ ಸಂಪರ್ಕವಾದ ರಾಷ್ಟ್ರೀಯ ಹೆದ್ದಾರಿ -10ರ ಕೆಲವು ಭಾಗಗಳು ಕೊಚ್ಚಿಹೋಗಿವೆ. ಮಂಗಳವಾರ ರಾತ್ರಿಯಿಂದ ತೀಸ್ತಾದಲ್ಲಿ ಪ್ರವಾಹದಿಂದಾಗಿ ಬಲೂತಾರ್ ಮತ್ತು ಲ್ಯಾಂಕೊ ಜಲವಿದ್ಯುತ್ ಯೋಜನೆಯ ಬಳಿ ಸೇತುವೆಗಳು ಕುಸಿದಿವೆ. ಪ್ರವಾಹ ಪೀಡಿತರಿಗೆ ಕಾಳಜಿ ಕೇಂದ್ರ ತೆರೆದಿದ್ದು, ನೂರಾರು ಜನರು ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತೀಸ್ತಾ ಹರಿಯುವ ಉತ್ತರ ಬಂಗಾಳ ಮತ್ತು ಬಾಂಗ್ಲಾದೇಶಕ್ಕೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಈ ನಡುವೆ ಮಂಗನ್, ಗ್ಯಾಂಗ್ಟಕ್, ಪಕ್ಯೋಂಗ್ ಮತ್ತು ನಾಮ್ಚಿ ಜಿಲ್ಲೆಗಳಲ್ಲಿ ಶಾಲೆಗಳನ್ನು ಅ. 8ರ ವರೆಗೆ ಮುಚ್ಚಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

‘ಹ್ಲೋನಕ್‌ ಸರೋವರದ ಕೆಲವು ಭಾಗಗಳಲ್ಲಿ ಮೇಘಸ್ಫೋಟದಿಂದ ಅನೇಕ ಸಂಸ್ಥೆಗಳಿಗೆ ಹಾನಿ ಆಗಿದೆ’ ಎಂದು ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಂಗ್‌ ಅವರು ಸಿಂಗ್‌ತಮ್‌ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಸಿಂಗ್‌ತಮ್‌ ನಗರ ಪಂಚಾಯತ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.  

‘ಈ ಕಷ್ಟದ ಸಮಯದಲ್ಲಿ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಎಲ್ಲಾ ರೀತಿಯ ಸಹಾಯ ಮತ್ತು ಪರಿಹಾರ ಒದಗಿಸಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಭರವಸೆ ನೀಡುತ್ತೇನೆ. ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದೇವೆ. ನಾಗರಿಕರ ಸುರಕ್ಷತೆ  ಖಚಿತಪಡಿಸಿಕೊಳ್ಳಲು ಲಭ್ಯವಿರುವ ಎಲ್ಲಾ ಸಂಪನ್ಮೂಲ ಸಜ್ಜುಗೊಳಿಸುತ್ತಿದ್ದೇವೆ. ಸವಾಲುಗಳನ್ನು ಎದುರಿಸಲು ತಂಡಗಳು ಹಗಲು ರಾತ್ರಿ ಕೆಲಸ ಮಾಡುತ್ತಿವೆ’ ಎಂದು ತಮಾಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. 

ಮುಗುಥಾಂಗ್‌ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ  ಪಿಟಿಐ ಚಿತ್ರ

ಸಿಕ್ಕಿಂ ಮುಖ್ಯಮಂತ್ರಿ ಜತೆ ಮೋದಿ ಚರ್ಚೆ 

ತೀಸ್ತಾ ನದಿಯಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಕ್ಕಿಂ  ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಂಗ್‌ ಅವರೊಂದಿಗೆ ಬುಧವಾರ ಮಾತುಕತೆ ನಡೆಸಿದರು. ‘ಸಿಕ್ಕಿಂ ಪ್ರವಾಹ ಕುರಿತು ಮುಖ್ಯಮಂತ್ರಿ ಅವರಿಂದ ಮಾಹಿತಿ ಪಡೆದಿದ್ದೇನೆ. ಸವಾಲು ಎದುರಿಸಲು ಸಾಧ್ಯವಿರುವ ಎಲ್ಲ ಸಹಕಾರ ನೀಡಲಾಗುವುದು. ಸಂತ್ರಸ್ತರ ಸುರಕ್ಷತೆ ಮತ್ತು ಯೋಗ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ಮೋದಿ ಹೇಳಿದ್ದಾರೆ. 

ಎನ್‌ಡಿಆರ್‌ಎಫ್‌ ತಂಡ ನಿಯೋಜನೆ

ಹಠಾತ್‌ ಪ್ರವಾಹದ ಕಾರಣ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮೂರು ತಂಡಗಳನ್ನು ನಿಯೋಜಿಸಿದೆ.  ಗ್ಯಾಂಗ್ಟಕ್‌ನಲ್ಲಿ ಒಂದು ತಂಡ ಮತ್ತು ಪಕ್ಕದ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಎರಡು ತಂಡಗಳನ್ನು ನಿಯೋಜಿಸಲಾಗಿದೆ.  ಸಿಕ್ಕಿಂನಲ್ಲಿ ಸುಮಾರು 2000 ಪ್ರವಾಸಿಗರು ಸಿಲುಕಿದ್ದಾರೆ ಮತ್ತು ಅವರೊಂದಿಗೆ ಸಂಪರ್ಕ ಸಾಧಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಜ್ಯ ಆಡಳಿತ ಹೇಳಿದೆ. 39 ಕಾಳಜಿ ಶಿಬಿರಗಳು ತೆರೆಯಲಿದ್ದು 6572 ಜನರನ್ನು ಸ್ಥಳಾಂತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.