ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಶನಿವಾರವೂ ಭಾರಿ ಮಳೆಯಾಗಿದೆ. ಒಂದು ವಾರದಲ್ಲಿ ದೇಶದಾದ್ಯಂತ ನಡೆದ ಮಳೆ ಸಂಬಂಧಿ ಅವಘಡಗಳಲ್ಲಿ 106 ಜನರು ಮೃತಪಟ್ಟಿದ್ದಾರೆ. ಗುಜರಾತ್‌ನಲ್ಲಿ ಶುಕ್ರವಾರದಿಂದ ಮುಂಗಾರು ಬಿರುಸು ಪಡೆದಿದೆ.
**
ಕೇರಳ
*ಎರ್ನಾಕುಳಂ, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ
* ವಯನಾಡ್‌ನ ಬಾಣಾಸುರ ಸಾಗರ ಅಣೆಕಟ್ಟೆಯು ಭರ್ತಿಯಾಗಿದ್ದು, ಒಂದು ಗೇಟಿನ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ. ಕಬಿನಿ ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ
* ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಭಾನುವಾರ ಮಧ್ಯಾಹ್ನ ಕಾರ್ಯಾರಂಭ ಮಾಡಲಿದೆ
* ವಯನಾಡ್ ಮತ್ತು ಮಲಪ್ಪುರದಲ್ಲಿ ಭೂಕುಸಿತದಲ್ಲಿ ಹಲವಾರು ಜನರು ಸಿಲುಕಿರುವ ಶಂಕೆಯಿದೆ. ಭೂಕುಸಿತದ ಅವಶೇಷಗಳನ್ನು ತೆರವು ಮಾಡಲಾಗುತ್ತಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ
* ವಯನಾಡ್‌ನ ಗುಡ್ಡಗಾಡು ಪ್ರದೇಶಗಳಲ್ಲಿನ ಗ್ರಾಮಗಳಿಗೆ ವಾಯುಪಡೆ ಹೆಲಿಕಾಪ್ಟರ್‌ಗಳ ಮೂಲಕ ಆಹಾರ ಮತ್ತು ಕುಡಿಯುವ ನೀರನ್ನು ‘ಏರ್‌ಡ್ರಾಪ್’ ಮಾಡಲಾಗುತ್ತಿದೆ
* ಕೇರಳಕ್ಕೆ ಅಗತ್ಯ ನೆರವು ನೀಡುವಂತೆ ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದಾರೆ. ರಾಹುಲ್ ಭಾನುವಾರ ವಯನಾಡ್‌ಗೆ ಭೇಟಿ ನೀಡಲಿದ್ದಾರೆ
**
ಮಹಾರಾಷ್ಟ್ರ
* ಕೃಷ್ಣಾ ಮತ್ತು ಪಂಚಗಂಗಾ ನದಿ ಉಕ್ಕಿ ಹರಿಯುತ್ತಿವೆ
* ಜಲಾವೃತದ ಕಾರಣ ಬೆಂಗಳೂರು–ಮುಂಬೈ ಹೆದ್ದಾರಿ ಬಂದ್ ಆಗಿದೆ
* ಕರ್ನಾಟಕದಲ್ಲಿ ಆಲಮಟ್ಟಿ ಅಣೆಕಟ್ಟೆಯಿಂದ ನೀರನ್ನು ಹೊರಬಿಡುತ್ತಿರುವುದರಿಂದ ಸಾಂಗ್ಲಿ ಮತ್ತು ಕೊಲ್ಲಾಪುರದಲ್ಲಿ ಪ್ರವಾಹದ ನೀರು ಇಳಿಮುಖವಾಗುತ್ತಿದೆ. ಪ್ರವಾಹ ಪೂರ್ಣ ಪ್ರಮಾಣದಲ್ಲಿ ಇಳಿಮುಖವಾಗಲು ಇನ್ನೂ 7–8 ದಿನ ಬೇಕಾಗಬಹುದು. 306 ನಿರಾಶ್ರಿತ ಶಿಬಿರಗಳನ್ನು ಆರಂಭಿಸಲಾಗಿದೆ
* ಸಾಂಗ್ಲಿ ಜಿಲ್ಲೆಯಲ್ಲಿ ವಾಡಿಕೆಯ ಮಳೆಗಿಂತ ಶೇ 758ರಷ್ಟು ಹೆಚ್ಚು ಮಳೆ ಕೇವಲ ಒಂಬತ್ತು ದಿನಗಳಲ್ಲಿ ಆಗಿದೆ. ಕೊಲ್ಲಾಪುರದಲ್ಲಿ ವಾಡಿಕೆಯ ಮಳೆಗಿಂತ ಶೇ 480ರಷ್ಟು ಹೆಚ್ಚು ಮಳೆ ಕೇವಲ ಒಂಬತ್ತು ದಿನಗಳಲ್ಲಿ ಆಗಿದೆ. ಕೊಯ್ನಾ ಜಲಾಶಯಕ್ಕೆ ಒಂಬತ್ತು ದಿನಗಳಲ್ಲಿ 50 ಟಿಎಂಸಿ ನೀರು ಹರಿದುಬಂದಿದೆ
**
ಗುಜರಾತ್
* ಗುಜರಾತ್‌ನ ಅಹಮದಾಬಾದ್ ಮತ್ತು ನಾಡಿಯಾದ್ ನಗರಗಳಲ್ಲಿ ಶನಿವಾರ ಭಾರಿ ಮಳೆಯಾಗಿದೆ. ಎರಡೂ ನಗರಗಳ ಹಲವು ರಸ್ತೆಗಳು ಮತ್ತು ಜನವಸತಿ ಪ್ರದೇಶಗಳು ಪ್ರವಾಹದಿಂದ ಜಲಾವೃತವಾಗಿವೆ. ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತವಾಗಿದೆ.
* ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ರಕ್ಷಣಾ ಕಾರ್ಯಕ್ಕೆ ಎನ್‌ಡಿಆರ್‌ಎಫ್‌ನ ಮತ್ತಷ್ಟು ತಂಡಗಳನ್ನು ಕಳುಹಿಸಿಕೊಡುವಂತೆ ಗುಜರಾತ್ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
* ರಾಜಕೋಟ್ ಜಿಲ್ಲೆಯಲ್ಲೂ ಪ್ರವಾಹದ ಸ್ಥಿತಿ ಉಂಟಾಗಿದೆ. ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಸಿಲುಕಿದ್ದವರನ್ನು ವಾಯುಪಡೆಯ ಹೆಲಿಕಾಪ್ಟರ್ ಬಳಸಿ ರಕ್ಷಿಸಲಾಗಿದೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.