ADVERTISEMENT

ವೈಜ್ಞಾನಿಕ ನಗರೀಕರಣದಿಂದ ಕೊಡಗು, ದಕ್ಷಿಣ ಒಳನಾಡು, ಕೇರಳ ಪ್ರವಾಹ: ಬಾಂಬೆ ಐಐಟಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2018, 16:19 IST
Last Updated 21 ಆಗಸ್ಟ್ 2018, 16:19 IST
   

ನವದೆಹಲಿ: ಕೊಡಗು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಹಾಗೂ ಕೇರಳದಲ್ಲಿ ಪ್ರವಾಹ ಉಂಟಾಗಲು ಅವ್ಯಾಹತವಾಗಿ ನಡೆದಿರುವ ನಗರಿಕರಣವೇ ಪ್ರಮುಖ ಕಾರಣ ಎಂದು ಬಾಂಬೆ ಐಐಟಿ ಹೇಳಿದೆ.

ಕ್ಷಿಪ್ರಗತಿಯ ನಗರೀಕರಣಕ್ಕೆ ದಕ್ಷಿಣ ಕನ್ನಡದಲ್ಲಿ ನೇತ್ರಾವತಿ ಕಣಿವೆಯಲ್ಲಿ ಅಪಾರ ಪ್ರಮಾಣ ಅರಣ್ಯ ನಾಶವಾಗಿದೆ. ಅಲ್ಲದೇ ಕಾಂಕ್ರೀಕರಣ ಹೆಚ್ಚಾಗಿದೆ. ಇವರೆಡು ಅಂಶಗಳು ಇತ್ತೀಚಿನ ಪ್ರವಾಹಕ್ಕೆ ಪ್ರಮುಖ ಕಾರಣಗಳು ಎಂದು ಐಐಟಿ ಸಂಶೋಧಕರು ತಿಳಿಸಿದ್ದಾರೆ.

ನೇತ್ರಾವತಿ ಕಣಿವೆಯಲ್ಲಿ ಸಂಶೋಧಕರು ಸಂಶೋಧನೆ ಪೂರ್ಣಗೊಳಿಸಿದ್ದು, ಉಳಿದ ನದಿ ಕಣಿವೆಗಳಲ್ಲೂ ಸಂಶೋಧನೆ ನಡೆಸಲು ನಿರ್ಧರಿಸಿದ್ದಾರೆ. ಸಂಶೋಧನಾ ವರದಿ ಇತ್ತೀಚೆಗೆ ಎನ್ವಿರಾನ್‌ಮೆಂಟಲ್‌ ಅರ್ಥ್‌ ಸೈನ್ಸ್‌ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ADVERTISEMENT

ನೇತ್ರಾವತಿ ಕಣಿವೆಯಲ್ಲಿ 1972ರಿಂದ 2012ರವರೆಗೆ ನಾಲ್ಕು ಪಟ್ಟು ಹೆಚ್ಚು ನಗರೀಕರಣವಾಗಿದೆ. 2030ರ ವೇಳೆಗೆ ಇದು 240 ಚದರ ಕಿಲೋಮೀಟರ್‌ನಿಂದ 340 ಚದರ ಕಿಲೋ ಮೀಟರ್‌ಗೆ ವಿಸ್ತರಣೆಯಾಗಲಿದೆ. ನೇತ್ರಾವತಿ ಕಣಿವೆಯಲ್ಲಿ ಅಂದಾಜು 12 ಲಕ್ಷ ಜನರು ವಾಸಿಸುತ್ತಿದ್ದು, ಎರಡು ಪಟ್ಟು ಏರಿಕೆಯಾಗಲಿದೆ. ಈ ಅವಧಿಯಲ್ಲಿ ಕೃಷಿ ಪ್ರದೇಶ ಕೂಡ ಶೇ 15ರಷ್ಟು ಹೆಚ್ಚಾಗಿದ್ದು, 2030ರ ವೇಳೆಗೆ ಇದು ಶೇ 24ರಷ್ಟು ಹೆಚ್ಚಳವಾಗಲಿದೆ.

ಅರಣ್ಯ ಪ್ರದೇಶ ಕೂಡ ಶೇ 18ರಷ್ಟು ಕಡಿಮೆಯಾಗಿದ್ದು, ಇನ್ನು 12 ವರ್ಷಗಳಲ್ಲಿ ಶೇ 26ರಷ್ಟು ಅರಣ್ಯ ಕಡಿಮೆಯಾಗಲಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.

‘ನದಿಮುಖಜ ಭೂಮಿಯಲ್ಲಿ ಅವೈಜ್ಞಾನಿಕವಾದ ಅಭಿವೃದ್ಧಿ ಕೆಲಸಗಳಾಗಿರು ಕಡೆಗಳಲ್ಲಿ ಪ್ರವಾಹ ಉಂಟಾಗಿದೆ. ಕೇರಳ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಅವೈಜ್ಞಾನಿಕವಾದ ನಗರೀಕರಣವಾಗಿದೆ. ಪೆರಿಯಾರ್‌ ನದಿಯ ಎರಡೂ ದಂಡೆಯಲ್ಲಿ ಅಡ್ಡಾದಿಡ್ಡಿಯಾಗಿ ನಗರ ಬೆಳವಣಿಗೆಯಾಗಿರುವುದರಿಂದ ಪ್ರವಾಹ ಉಕ್ಕೇರಿದೆ. ಇದರಿಂದ ಅಪಾರ ಪ್ರಮಾಣದ ಹಾನಿ ಆಗಿದೆ’ ಎಂದು ಐಐಟಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊಫೆಸರ್‌ ಟಿ.ಐ.ಎಲ್ಧೊ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.