ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಅದರ ಉಪನಗರಗಳು ಸೋಮವಾರ ಮುಂಜಾನೆಮಂಜು, ಹೊಗೆ ಹಾಗೂ ಚಳಿಯನ್ನು ಹೊದ್ದು ಮಲಗಿದ್ದವು.
ನಗರದಲ್ಲಿ ಸೋಮವಾರ ಗರಿಷ್ಠ 9.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. 1901ರಿಂದ ಪರಿಗಣಿಸಿದರೆ, ಇದು 119 ವರ್ಷಗಳಲ್ಲಿ ಅತ್ಯಂತ ಚಳಿಯ ಡಿಸೆಂಬರ್ ತಿಂಗಳು ಎನಿಸಿದೆ. ತಾಪಮಾನವು ವಾಡಿಕೆಗಿಂತ ಅರ್ಧದಷ್ಟುಕುಸಿತ ಕಂಡಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ತಿಳಿಸಿದ್ದಾರೆ.
ಕನಿಷ್ಠ ತಾಪಮಾನದಲ್ಲೂ ಇಳಿಕೆಯಾಗಿದ್ದು, 2.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದಟ್ಟ ಮಂಜು ಕವಿದಿದ್ದರಿಂದ ಸಮೀಪದ ವಸ್ತುಗಳೂ ಕಾಣದಾಗಿದ್ದವು. ವಿಮಾನ, ರೈಲುಗಳ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.
ರಸ್ತೆ ಕಾಣಿಸದೇ ಅಪಘಾತ: 6 ಸಾವು
ದಟ್ಟವಾದ ಮಂಜು ಆವರಿಸಿರುವ ಕಾರಣ ಸ್ವಲ್ಪ ಮುಂದಿರುವುದು ಕೂಡ ಕಾಣಿಸುತ್ತಿಲ್ಲ.ಉತ್ತರ ಪ್ರದೇಶದ ನೊಯ್ಡಾ ಸಮೀಪದಲ್ಲಿ ಕಾರೊಂದು ಕಾಲುವೆಗೆ ಉರುಳಿದ್ದು, ಇಬ್ಬರು ಮಕ್ಕಳು ಸೇರಿ 6 ಜನರು ಮೃತಪಟ್ಟಿದ್ದಾರೆ.
ವರ್ಷದಲ್ಲಿ 11 ಸಾವಿರ ಬಲಿ
ಉತ್ತರ ಭಾರತದಲ್ಲಿಡಿಸೆಂಬರ್–ಜನವರಿಯಲ್ಲಿ ತೀವ್ರ ಚಳಿ ಹಾಗೂ ಮಂಜಿನ ವಾತಾವರಣ ಇರುತ್ತದೆ. ಮಂಜಿನಿಂದಾಗಿ ರಸ್ತೆ ಕಾಣಿಸದಂತಹ ಸ್ಥಿತಿ ಇರುತ್ತದೆ. ಈ ಕಾರಣದಿಂದಲೇ ಪ್ರತಿ ವರ್ಷ ಅಪಘಾತಗಳಿಗೆ ಸಾವಿರಾರು ಮಂದಿ ಬಲಿಯಾಗುತ್ತಿದ್ದಾರೆ.
* 22 ವರ್ಷಗಳಿಂದ ದೆಹಲಿಯು ತೀವ್ರ ಚಳಿಗಾಲವನ್ನು ಅನುಭವಿಸುತ್ತಿದೆ
* ಚಳಿಯ ಜತೆಗೆ ವಾಯುಮಾಲಿನ್ಯದ ಪ್ರಮಾಣವೂ ಹೆಚ್ಚಳವಾಗಿದ್ದು, ವಾಯುಗುಣಮಟ್ಟ ಕುಸಿದಿದೆ
* ವರ್ಷಾಂತ್ಯದ ಪ್ರವಾಸ ಹಾಗೂ ತುರ್ತಾಗಿ ತೆರಳಬೇಕಿದ್ದ ಪ್ರಯಾಣಿಕರೂ ಮಂಜಿನ ವಾತಾವರಣದಿಂದ
ತೊಂದರೆಗೀಡಾಗಿದ್ದಾರೆ.
ಮೈನಸ್ ಉಷ್ಣಾಂಶ
ಕಾಶ್ಮೀರ ಕಣಿವೆಯ ಬಹುತೇಕ ಕಡೆಗಳಲ್ಲಿ ಉಷ್ಣಾಂಶದ ಮಟ್ಟ ಮೈನಸ್ ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.ಶ್ರೀನಗರದಲ್ಲಿ ಈ ಋತುವಿನ ಅತ್ಯಂತ ಚಳಿಯ ವಾತಾವರಣ ಸೋಮವಾರ ದಾಖಲಾಗಿದೆ. ದಾಲ್ ಸರೋವರ ಸೇರಿದಂತೆ ಜಲಮೂಲಗಳು ಹಿಮಗಟ್ಟಿವೆ.ಹೊಸ ವರ್ಷದ ಮೊದಲ ವಾರದಲ್ಲಿ ಮಳೆ ಹಾಗೂ ಹಿಮಪಾತದ ಸಾಧ್ಯತೆಯಿದ್ದು ಕಣಿವೆಯಲ್ಲಿ ಚಳಿಯಿಂದ ಕೊಂಚ ಬಿಡುವು ಸಿಗುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.