ಭುವನೇಶ್ವರ: ಒಡಿಶಾದ ಕರಾವಳಿ ಪ್ರದೇಶಕ್ಕೆ ಈಚೆಗೆ ಅಪ್ಪಳಿಸಿದ್ದ ಫೋನಿ ಚಂಡಮಾರುತದ ಪರಿಣಾಮ ಪುರಿಯ ಜಗನ್ನಾಥ ದೇವಾಲಯ ಮತ್ತು ಕೊನಾರ್ಕ್‌ನ ಸೂರ್ಯ ದೇವಾಲಯಕ್ಕೂ ಹಾನಿ ಸಂಭವಿಸಿದೆ ಎಂದು ಸರ್ಕಾರ ಹೇಳಿದೆ.
ಈ ಎರಡು ದೇವಾಲಯಗಳಿಗೆ ದೇಶ, ವಿದೇಶಗಳಿಂದ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಕೊನಾರ್ಕ್‌ನ ಸೂರ್ಯ ದೇವಾಲಯವು ಪುರಿಯಿಂದ 25 ಕಿ.ಮೀ. ದೂರದಲ್ಲಿದೆ.
ಭಾರತೀಯ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಈ ದೇವಾಲಯಗಳ ದುರಸ್ತಿ ಕಾರ್ಯಗಳಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
‘ದೇವಾಲಯಗಳ ಮೂಲ ರಚನೆಗಳಿಗೆ ಯಾವುದೇ ಧಕ್ಕೆ ಉಂಟಾಗಿಲ್ಲ. ಆದರೆ ದೇಗುಲದ ಆವರಣದಲ್ಲಿರುವ ಇತರ ರಚನೆಗಳಿಗೆ ಹಾನಿ ಉಂಟಾಗಿದೆ’ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.
ಜಗನ್ನಾಥ ದೇವಾಲಯದಲ್ಲಿ ದೈನಂದಿನ ಆಚರಣೆಗಳು ಪುನರಾರಂಭಗೊಂಡಿವೆ. ಸದ್ಯ ಸ್ಥಳೀಯರಷ್ಟೇ ಈ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ. ಚಂಡಮಾರುತದಿಂದ ಹಾನಿ ಸಂಭವಿಸಿರುವ ಪ್ರದೇಶಗಳ ದೇವಾಲಯಗಳಿಗೆ ತೆರಳದಂತೆ ಈಚೆಗೆ ಸರ್ಕಾರ ಪ್ರವಾಸಿಗರಿಗೆ ಎಚ್ಚರಿಕೆ ನೀಡಿತ್ತು.
ಚಂಡಮಾರುತದ ಬಳಿಕ ಕೋನಾರ್ಕ್‌ನ ಸೂರ್ಯದೇವಾಲಯವನ್ನು ಮುಚ್ಚಲಾಗಿದೆ. ಇದೊಂದು ಪ್ರಾರ್ಥನಾ ಮಂದಿರವಲ್ಲದ ಕಾರಣ ಇಲ್ಲಿ ದೈನಂದಿನ ಧಾರ್ಮಿಕ ವಿಧಿವಿಧಾನ ನಡೆಯುವುದಿಲ್ಲ. ಆದರೆ ಇದೊಂದು ಸಂರಕ್ಷಿತ ಸ್ಮಾರಕವಾಗಿದೆ.
ಗಾಳಿಗೆ ಮರಗಳು ಮುರಿದು ಬಿದ್ದ ಪರಿಣಾಮ ಸೂರ್ಯ ದೇವಾಲಯದ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ಪ್ರಧಾನ ನಿರ್ದೇಶಕಿ ಉಷಾ ಶರ್ಮಾ ನೇತೃತ್ವದ ತಂಡ ಶುಕ್ರವಾರ ಈ ಎರಡು ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಸೂರ್ಯ ದೇವಾಲಯವನ್ನು ಶೀಘ್ರ ಪ್ರವಾಸಿಗರ ಭೇಟಿಗೆ ಮುಕ್ತಗೊಳಿಸಲಾಗುವುದು ಎಂದು ಎಎಸ್‌ಐ ತಂಡ ಭರವಸೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 4ರಂದು ನಡೆಯಲಿರುವ ರಥ ಯಾತ್ರೆಗೂ ಮುನ್ನ ಜಗನ್ನಾಥ ದೇವಾಲಯದ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸುವ ಭರವಸೆಯನ್ನೂ ನೀಡಿದೆ ಎಂದಿದ್ದಾರೆ.
ಫೋನಿ: ಮೃತರ ಸಂಖ್ಯೆ 43ಕ್ಕೆ ಏರಿಕೆ
ಭುವನೇಶ್ವರ: ಫೋನಿ ಚಂಡಮಾರುತಕ್ಕೆ ನಲುಗಿರುವ ಒಡಿಶಾದಲ್ಲಿ ಕಟಕ್ ಮತ್ತು ಖುರ್ದಾ ಜಿಲ್ಲೆಯಲ್ಲಿ ಒಟ್ಟು ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಆ ಮೂಲಕ ಮೃತರ ಸಂಖ್ಯೆ 43ಕ್ಕೆ ಏರಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಈ ನಡುವೆ, ರಾಜ್ಯದ ಕರಾವಳಿ ಭಾಗದ ಹಲವಾರು ಪಟ್ಟಣಗಳಲ್ಲಿ ಕುಡಿಯುವ ನೀರಿನ ಕೊರತೆ ಹಾಗೂ ವಿದ್ಯುತ್ ಸಂಪರ್ಕ ಇಲ್ಲದಿರುವುದನ್ನು ಖಂಡಿಸಿ ಜನರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ.
ಕೇಂದ್ರಪಾಡ, ಜಗತ್‌ಸಿಂಗ್‌ಪುರ, ಕಟಕ್ ಜಿಲ್ಲೆಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ದೂರಿ ಜನರು ಪ್ರತಿಭಟನೆ ಮುಂದುವರಿಸಿದ್ದಾರೆ. ರಾಜಧಾನಿ ಭುವನೇಶ್ವರದಲ್ಲಿ ಸಹ ಜನರು ಬೀದಿಗಿಳಿದಿದ್ದಾರೆ. ಸತತ ಎಂಟನೇ ದಿನವೂ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿರುವುದನ್ನು ಖಂಡಿಸಿ ಆಕ್ರೋಶಗೊಂಡಿರುವ ಜನರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
‘ಎನ್‌ಡಿಆರ್‌ಎಫ್ ನಿಯೋಜನೆ’: ಪರಿಹಾರ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಸಹಕಾರಿಯಾಗುವಂತೆ 50 ಸ್ಥಳಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಪವರ್ ಕಟರ್, ಪ್ಲಾಸ್ಮಾ ಮತ್ತು ಗ್ಯಾಸ್ ಕಟರ್ ಸೇರಿದಂತೆ ಅತ್ಯಾಧುನಿಕ ಸಲಕರಣೆ, ಯಂತ್ರೋಪಕರಣಗಳನ್ನು ಒದಗಿಸಲಾಗಿದೆ’ ಎಂದು ಎನ್‌ಡಿಆರ್‌ಎಫ್ ನಿರ್ದೇಶಕ ಎಸ್.ಎನ್.ಪ್ರಧಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.