ADVERTISEMENT

ಕಾರ್ಮಿಕರಿಂದ ರಸ್ತೆ ತಡೆ ಪ್ರತಿಭಟನೆ: ಚೆನ್ನೈ–ಬೆಂಗಳೂರು ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 13:57 IST
Last Updated 19 ಡಿಸೆಂಬರ್ 2021, 13:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಕಲುಷಿತ ಆಹಾರವನ್ನು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಹಕಾರ್ಮಿಕರ ಆರೋಗ್ಯಸ್ಥಿತಿಯ ವಿವರವನ್ನು ನೀಡಬೇಕು ಎಂದು ಆಗ್ರಹಪಡಿಸಿ ನೂರಾರು ಕಾರ್ಮಿಕ ಮಹಿಳೆಯರು ಚೆನ್ನೈ–ಬೆಂಗಳೂರು ಹೆದ್ದಾರಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರು –ಚೆನ್ನೈ ನಡುವಿನ ಸಂಪರ್ಕ ರಸ್ತೆ ಇದಾಗಿದ್ದು, ಹೆಚ್ಚಿನ ಸಂಚಾರದಟ್ಟಣೆ ಇರಲಿದೆ. ವಾರಾಂತ್ಯದಲ್ಲಿ ಕಾಂಚಿಪುರಂ, ವೆಲ್ಲೋರ್, ತಿರುಪತ್ತೂರು, ಹೊಸೂರು, ಬೆಂಗಳೂರಿಗೆ ಹೊರಟಿದ್ದವರು ಕಾರ್ಮಿಕರ ಪ್ರತಿಭಟನೆಯಿಂದಾಗಿ ಗಂಟೆಗಟ್ಟಲೆ ಕಾಯಬೇಕಾಯಿತು.

ಶ್ರೀಪೆರಂಬೂದೂರಿನಲ್ಲಿ ಇರುವ ಮೊಬೈಲ್‌ ಉತ್ಪಾದನಾ ಘಟಕ ಫಾಕ್ಸ್‌ಕಾನ್‌ಗೆ ಸೇರಿದ್ದ ಕಾರ್ಮಿಕರು ಧರಣಿ ನಡೆಸಿದ್ದು, ಎಂಟು ಗಂಟೆ ವಾಹನಗಳ ಸಂಚಾರ ವ್ಯತ್ಯಯವಾಯಿತು.ಮಹಿಳೆಯರು ಪ್ರತಿಭಟನೆ ಕೈಬಿಡುವ ಸೂಚನೆ ಕಾಣಿಸದಿದ್ದಾಗ ಸುಂಗುವರ್ಚತಿರಂ ಮೂಲಕ ವಾಹನಗಳು ತೆರಳಲು ಅನುವು ಮಾಡಿಕೊಟ್ಟರು.

ADVERTISEMENT

ಕಂಪನಿ ಕಲ್ಪಿಸಿದ್ದ ಹಾಸ್ಟೆಲ್‌ನಲ್ಲಿ ಆಹಾರ ಸೇವಿಸಿದ್ದ 159 ಮಹಿಳೆಯರು ಅಸ್ವಸ್ಥಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಎಂಟು ಮಂದಿ ಹಾಸ್ಟೆಲ್‌ಗೆ ಮರಳಿರಲಿಲ್ಲ. ಈ ಕಾರ್ಮಿಕರ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಹಾಸ್ಟೆಲ್‌ನಲ್ಲಿ ಉತ್ತಮ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಈ ಕುರಿತು ಪ್ರತಿಕ್ರಿಯಿಸಿದ ತಿರುವಲ್ಲೂರು ಜಿಲ್ಲಾಧಿಕಾರಿ ಅಲ್ಬಿ ಜಾನ್‌ ಅವರು, ‘ಅಸ್ವಸ್ಥಗೊಂಡಿದ್ದ ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.