ಚೆನ್ನೈ: ಇಲ್ಲಿನ ಮಾಧವರಂನಲ್ಲಿ ಎದೆಹಾಲು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪ್ರೊಟೀನ್ ಪೌಡರ್ ಮಾರಾಟ ಮಳಿಗೆಯೊಂದರ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ, ಮಳಿಗೆಗೆ ಬೀಗಮುದ್ರೆ ಹಾಕಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಮಳಿಗೆ ಮಾಲೀಕ, ಪ್ರೊಟೀನ್ ಪೌಡರ್ ಮಾರಾಟ ಮಾಡಲು ಪರವಾನಗಿ ಹೊಂದಿದ್ದರು. ಆದರೆ, ಎದೆ ಹಾಲನ್ನು 50 ಎಂಎಲ್‌ನ ಪ್ರತಿ ಬಾಟಲ್ ಅನ್ನು ₹500ರಂತೆ ಅವರು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಮಾಧವರಂನಲ್ಲಿ ಮಾರಾಟ ಮಾಡಲು ಎದೆಹಾಲು ಸಂಗ್ರಹಿಸಿಟ್ಟಿರುವ ಬಗ್ಗೆ ಕೇಂದ್ರ ಪರವಾನಗಿ ಅಧಿಕಾರಿಗಳಿಂದ ಕಳೆದ ವಾರ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ದಾಳಿ ನಡೆಸಲಾಯಿತು. ಬಾಟಲ್‌ಗಳಲ್ಲಿ ಎದೆಹಾಲು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ದಾಳಿಯ ವೇಳೆ ಮಳಿಗೆಯಿಂದ 50 ಬಾಟಲ್ ಎದೆಹಾಲು ವಶಪಡಿಸಿಕೊಳ್ಳಲಾಗಿದೆ. ಇದರ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ದಾಳಿ ವೇಳೆ, ಅಧಿಕಾರಿಗಳು ಎದೆಹಾಲು ದಾನಿಗಳ ಮೊಬೈಲ್ ಫೋನ್ ಸಂಖ್ಯೆಗಳನ್ನು ಪತ್ತೆ ಹಚ್ಚಿದ್ದಾರೆ. ‘ಮಳಿಗೆಗೆ ಬೀಗಮುದ್ರೆ ಹಾಕಿದ್ದೇವೆ. ನಿಯಮ ಉಲ್ಲಂಘನೆಯ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ತಿಳಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಳಿಗೆ ಮಾಲೀಕರು, ಸೇವಾ ಉದ್ದೇಶದಿಂದ ತಾಯಂದಿರು ಎದೆ ಹಾಲು ನೀಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದಲ್ಲಿ ಎದೆ ಹಾಲು ಮಾರಾಟ ನಿಷೇಧಿಸಿರುವ ಬೆನ್ನಲ್ಲೇ, ಚೆನ್ನೈನಲ್ಲಿ ಇದೇ ಮೊದಲ ಬಾರಿಗೆ ಎದೆಹಾಲು ಮಾರಾಟ ಮಾಡುತ್ತಿರುವ ಪ್ರಕರಣ ಬಹಿರಂಗವಾಗಿದೆ. ದೇಶದ ಆಹಾರ ನಿಯಂತ್ರಕ ಮೇ 24ರಂದು ಎದೆಹಾಲಿನ ಅನಧಿಕೃತ ವಾಣಿಜ್ಯೀಕರಣದ ವಿರುದ್ಧ ಎಚ್ಚರಿಕೆಯನ್ನು ಸಹ ನೀಡಿತ್ತು.
‘ಎಫ್‌ಎಸ್‌ಎಸ್ ಕಾಯ್ದೆ 2006 ಮತ್ತು ನಿಯಮಗಳ ಅಡಿಯಲ್ಲಿ ಎದೆ ಹಾಲನ್ನು ಸಂಸ್ಕರಿಸಲು ಮತ್ತು ಮಾರಾಟ ಮಾಡಲು ಅನುಮತಿ ಇಲ್ಲ. ಆದ್ದರಿಂದ, ಎದೆಹಾಲಿನ ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಮತ್ತು ಎದೆಹಾಲು ಹಾಗೂ ಅದರ ಉತ್ಪನ್ನಗಳ ಮಾರಾಟವನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಎಫ್‌ಎಸ್‌ಎಸ್‌ಎಐ (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ಸಲಹೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.