ADVERTISEMENT

ದೆಹಲಿ ಕೋಚಿಂಗ್ ಸೆಂಟರ್‌ ದುರಂತ: ಕುಟುಂಬದ ಕನಸನ್ನೇ ಕೊಂದ ಶ್ರೇಯಾ ಸಾವು

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:38 IST
Last Updated 28 ಜುಲೈ 2024, 15:38 IST
ಶ್ರೇಯಾ ಯಾದವ್ ಅವರ ಶವವನ್ನು ಕೊಂಡೊಯ್ಯಲು ಅವರ ಕುಟುಂಬ ಸದಸ್ಯರು ಮತ್ತು ಬಂಧುಗಳು ನವದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಬಳಿ ಭಾನುವಾರ ಸೇರಿದ್ದರು –ಪಿಟಿಐ ಚಿತ್ರ
ಶ್ರೇಯಾ ಯಾದವ್ ಅವರ ಶವವನ್ನು ಕೊಂಡೊಯ್ಯಲು ಅವರ ಕುಟುಂಬ ಸದಸ್ಯರು ಮತ್ತು ಬಂಧುಗಳು ನವದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಬಳಿ ಭಾನುವಾರ ಸೇರಿದ್ದರು –ಪಿಟಿಐ ಚಿತ್ರ   

ಲಖನೌ: ‘ಅವಳು ನಮ್ಮ ಮೂವರು ಮಕ್ಕಳಲ್ಲಿ ಅತ್ಯಂತ ಬುದ್ಧಿವಂತಳಾಗಿದ್ದಳು... ಆಕೆ ಐಎಎಸ್ ಅಧಿಕಾರಿಯಾಗಬೇಕೆಂದು ನಾವೆಲ್ಲರೂ ಬಯಸಿದ್ದೆವು.. ಈಗ ಎಲ್ಲವೂ ನಂದಿಹೋಯಿತು’ ಎಂದು ಅಳಲು ತೋಡಿಕೊಂಡರು ಶ್ರೇಯಾ ಯಾದವ್ ಅವರ ತಂದೆ ರಾಜೇಂದ್ರ ಯಾದವ್.

ಶನಿವಾರ ಸಂಜೆ, ಮಳೆ ನೀರಿನಿಂದ ಜಲಾವೃತವಾದ ದೆಹಲಿಯ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ಸಿಲುಕಿ ಮೃತಪಟ್ಟ ಮೂವರು ವಿದ್ಯಾರ್ಥಿಗಳಲ್ಲಿ ತಮ್ಮ ಮಗಳು ಶ್ರೇಯಾ ಯಾದವ್‌ ಇರುವುದು ಖಚಿತವಾದಾಗಿನಿಂದ ರಾಜೇಂದ್ರ ದುಃಖದಲ್ಲಿ ಮುಳುಗಿದ್ದಾರೆ.

ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ನಿವಾಸಿಯಾದ ಶ್ರೇಯಾ ಅವರು ರಾಜೇಂದ್ರ ಅವರ ಎರಡನೇ ಪುತ್ರಿ. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಲು ಶ್ರೇಯಾ ಏಪ್ರಿಲ್‌ನಲ್ಲಿ ದೆಹಲಿಗೆ ತೆರಳಿದ್ದರು. ನೆರೆಯ ಸುಲ್ತಾನ್‌ಪುರ ಜಿಲ್ಲೆಯ ಕಮಲಾ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಶ್ರೇಯಾ ಪದವಿ ಪಡೆದಿದ್ದರು.

ADVERTISEMENT

ಜಿಲ್ಲೆಯ ಬಸಖಾರಿಯಲ್ಲಿ ಡೇರಿ ಅಂಗಡಿ ನಡೆಸುತ್ತಿರುವ ರಾಜೇಂದ್ರ ಯಾದವ್ ಅವರು, ಸಾಲ ಮಾಡಿ ಕೋಚಿಂಗ್ ಸೆಂಟರ್ ಶುಲ್ಕ ತುಂಬಿದ್ದರು. ದುರಂತದ ಮಾಹಿತಿ ದೊರೆತ ನಂತರ ರಾಜೇಂದ್ರ ಅವರು ರಾಷ್ಟ್ರ ರಾಜಧಾನಿಗೆ ತೆರಳಿದರು.

‘ಶ್ರೇಯಾ ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದಳು. ಹಾಗಾಗಿಯೇ ನಾವು ಅವಳನ್ನು ದೆಹಲಿಗೆ ಕಳುಹಿಸಿದ್ದೆವು’ ಎಂದು ಕುಟುಂಬದ ಇನ್ನೊಬ್ಬ ಸದಸ್ಯರು ದುಃಖ ವ್ಯಕ್ತಪಡಿಸಿದರು. 

ಹಾಶಿಂಪುರ್ ಬರ್ಸಾವಾನ್ ಗ್ರಾಮದಲ್ಲಿರುವ ಶ್ರೇಯಾ ಪೂರ್ವಜರ ಮನೆಯಲ್ಲಿ ಜಮಾಯಿಸಿದ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು, ದುರಂತಕ್ಕೆ ಕೋಚಿಂಗ್ ಇನ್‌ಸ್ಟಿಟ್ಯೂಟ್ ಆಡಳಿತವನ್ನು ದೂಷಿಸಿದರು. ‘ನೆಲಮಾಳಿಗೆಯಲ್ಲಿ ಗ್ರಂಥಾಲಯವನ್ನು ಏಕೆ ತೆರೆಯಬೇಕಿತ್ತು. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಕುಟುಂಬದ ಮತ್ತೊಬ್ಬ ಸದಸ್ಯರು ಆಗ್ರಹಿಸಿದರು.

ಸಮೂಹ ಸಂವಹನ ಅಧ್ಯಯನ ನಡೆಸಿರುವ ಶ್ರೇಯಾ ಅವರ ಸಹೋದರ ಕೂಡ ದೆಹಲಿಯಲ್ಲಿ ನೆಲೆಸಿದ್ದು, ‘ಮಾಧ್ಯಮಗಳ ಮೂಲಕ ದುರಂತದ ಬಗ್ಗೆ ಮಾಹಿತಿ ಗೊತ್ತಾಗಿದೆ. ನೆಲಮಾಳಿಗೆಯಲ್ಲಿ ಗ್ರಂಥಾಲಯ ಸ್ಥಾಪಿಸಲು ಸ್ಥಳೀಯಾಡಳಿತದ ಅಧಿಕಾರಿಗಳು ಏಕೆ ಅನುಮತಿ ನೀಡಿದ್ದಾರೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.