ನವದೆಹಲಿ: ಆಡಳಿತಾರೂಢ ಬಿಜೆಪಿ ವಿರುದ್ಧ ಸಂಸತ್ತಿನ ಹೊರಗಡೆಯೂ ಹೋರಾಟ ಮುಂದುವರಿಸುವುದಾಗಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಹೇಳಿದರು.
ಲೋಕಸಭೆಯಿಂದ ಉಚ್ಚಾಟನೆಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಚ್ಚಾಟನೆಯಂತಹ ಕ್ರಮಗಳ ಮೂಲಕ ತಾವು ಅದಾನಿ ವಿಚಾರ ಪ್ರಸ್ತಾಪಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ತಾವು ಸದನದ ಒಳಗೆ ಈ ಮಾತುಗಳನ್ನು ಆಡಲು ಬಯಸಿದ್ದುದಾಗಿ, ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ ಎಂಬುದಾಗಿ ಮೊಯಿತ್ರಾ ಹೇಳಿದರು. ಅವರ ಜೊತೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಕೆಲವು ಸಂಸದರು ಕೂಡ ಇದ್ದರು.
‘ನನಗೆ ಈಗ 49 ವರ್ಷ ವಯಸ್ಸು, ನಾನು ಇನ್ನೂ ಮೂವತ್ತು ವರ್ಷ ಹೋರಾಡುವೆ. ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಡುವೆ. ಗಟಾರದಲ್ಲಿ ನಿಂತು, ಬೀದಿಯಲ್ಲಿ ನಿಂತು ಹೋರಾಡುವೆ... ನಿಮ್ಮ ಕೊನೆ ಕಾಣಿಸುವೆ... ಇದು ನಿಮ್ಮ ಅಂತ್ಯದ ಆರಂಭ... ನಾವು ಮರಳಿ ಬರುತ್ತೇವೆ, ನಿಮ್ಮ ಕೊನೆಯನ್ನು ತೋರಿಸುತ್ತೇವೆ’ ಎಂದು ಆಕ್ರೋಶದಿಂದ ಹೇಳಿದರು.
ಜೊತೆಯಲ್ಲಿ ಇದ್ದ ಸೋನಿಯಾ, ಅವರ ಮಾತು ಕೇಳಿ ಚಪ್ಪಾಳೆ ತಟ್ಟಿದರು. ಮಹುವಾ ಉಚ್ಚಾಟನೆಯನ್ನು ವಿರೋಧಿಸಿ, ವಿರೋಧ ಪಕ್ಷಗಳ ಸದಸ್ಯರು ಸಂಸತ್ತಿನ ಆವರಣದಲ್ಲಿ ಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
‘ನನ್ನ ಬಾಯಿ ಮುಚ್ಚಿಸಿ, ಅದಾನಿ ವಿಚಾರವನ್ನು ಮರೆಮಾಚಬಹುದು ಎಂದು ಮೋದಿ ನೇತೃತ್ವದ ಸರ್ಕಾರ ಭಾವಿಸಿದ್ದರೆ, ಈ ಕಾಂಗರೂ ನ್ಯಾಯಾಲಯವು ಅದಾನಿ ಎಷ್ಟು ಮುಖ್ಯ ಎಂಬುದನ್ನು ತೋರಿಸಲು, ಕಾನೂನಿನ ಕ್ರಮವನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಮಾತನ್ನು ಹೇಳಲು ಬಯಸುವೆ’ ಎಂದು ಹೇಳಿದರು.
‘ಇಬ್ಬರು ಖಾಸಗಿ ವ್ಯಕ್ತಿಗಳ ಲಿಖಿತ ಹೇಳಿಕೆಯೊಂದನ್ನು ಮಾತ್ರ ಆಧರಿಸಿ ವರದಿ ಸಿದ್ಧವಾಗಿದೆ. ಆದರೆ ಆ ಇಬ್ಬರ ಮಾತುಗಳು ಪರಸ್ಪರ ವಿರೋಧಾಭಾಸಗಳಿಂದ ಕೂಡಿವೆ. ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ನನಗೆ ಅವಕಾಶವೇ ಇರಲಿಲ್ಲ. ಇಬ್ಬರು ಖಾಸಗಿ ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ, ನನ್ನ ಹಿಂದಿನ ಸಂಗಾತಿ. ಅವರು ಕೆಟ್ಟ ಉದ್ದೇಶದಿಂದ ಸಮಿತಿಯ ಎದುರು ಒಬ್ಬ ಸಾಮಾನ್ಯ ಪ್ರಜೆಯಂತೆ ಹಾಜರಾಗಿದ್ದರು’ ಎಂದು ಅವರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.