ಲಖನೌ: ಪತಿಗೆ ಪ್ರತ್ಯೇಕ ಕೋಣೆಯಲ್ಲಿ ವಾಸಿಸುವಂತೆ ಹೇಳುವುದು, ಆತನ ಜೊತೆ ಬಾಳ್ವೆಗೆ ನಿರಾಕರಿಸುವುದು ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಸಮನಾಗುತ್ತದೆ, ಇದು ವಿಚ್ಛೇದನ ನೀಡಲು ಆಧಾರವಾಗುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಕೌಟುಂಬಿಕ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಪತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಸುಭಾಷ್ ವಿದ್ಯಾರ್ಥಿ ಅವರು ಇದ್ದ ವಿಭಾಗೀಯ ಪೀಠವು ಈ ಮಾತು ಹೇಳಿದೆ.
‘ಮಾನಸಿಕ ಕ್ರೌರ್ಯವನ್ನು ನೇರವಾದ ಸಾಕ್ಷ್ಯಗಳ ಮೂಲಕ ಸಾಬೀತು ಮಾಡುವುದು ಕಷ್ಟ. ಪ್ರಕರಣದ ಸಂದರ್ಭ ಹಾಗೂ ವಾಸ್ತವಾಂಶಗಳನ್ನು ಪರಿಗಣಿಸಿ, ಅದನ್ನು ತೀರ್ಮಾನಿಸಬೇಕು’ ಎಂದು ಅದು ಹೇಳಿದೆ.
ಪತ್ನಿಯು ತನಗೆ ಆಕೆಯ ಕೊಠಡಿ ಪ್ರವೇಶಿಸಲು ಅವಕಾಶ ಕೊಡುತ್ತಿರಲಿಲ್ಲ. ಆಕೆಯು ತನ್ನ ಜೊತೆ ಬಾಳ್ವೆ ನಡೆಸಲು ಒಪ್ಪುತ್ತಿಲ್ಲ ಮತ್ತು ವೈವಾಹಿಕ ಹೊಣೆಯನ್ನು ಆಕೆ ನಿಭಾಯಿಸುತ್ತಿಲ್ಲ ಎಂಬುದನ್ನು ಪತಿಯು ಸ್ಪಷ್ಟವಾಗಿ ಹೇಳಿದ್ದಾರೆ. ಪತ್ನಿಯು ವೈವಾಹಿಕ ಸಂಬಂಧವನ್ನು ತೊರೆದಿದ್ದಳು ಎಂದು ಅನ್ನಿಸುತ್ತದೆ ಎಂದು ಕೋರ್ಟ್ ಹೇಳಿದೆ.
ಜೊತೆಯಾಗಿ ಬಾಳ್ವೆ ನಡೆಸುವುದು ಹಾಗೂ ಲೈಂಗಿಕ ಸಂಬಂಧ ಹೊಂದುವುದು ವೈವಾಹಿಕ ಸಂಬಂಧದ ಅಗತ್ಯ ಅಂಶ. ಆದರೆ ಇದಕ್ಕೆ ಪತ್ನಿಯು ನಿರಾಕರಿಸಿದರೆ, ಪತಿಗೆ ಬೇರೆ ಕೊಠಡಿಯಲ್ಲಿ ವಾಸಿಸುವಂತೆ ಒತ್ತಾಯಿಸಿದರೆ, ಆಕೆಯ ಆತನ ವೈವಾಹಿಕ ಹಕ್ಕುಗಳನ್ನು ನಿರಾಕರಿಸಿದಂತೆ ಆಗುತ್ತದೆ. ಇದು ಆತನ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದು ದೈಹಿಕ ಹಾಗೂ ಮಾನಸಿಕ ಕ್ರೌರ್ಯ ಕೂಡ ಆಗುತ್ತದೆ ಎಂದು ಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.