ನವದೆಹಲಿ: ಹೊರ ದೇಶಗಳಿಂದ ಸೇವಾ ಸಂಸ್ಥೆಗಳು ದೇಣಿಗೆ ಪಡೆಯಲು ಆಧಾರ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸುವ 'ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ, 2010 ತಿದ್ದುಪಡಿಗೆ' ಸೋಮವಾರ ಲೋಕಸಭೆ ಅನುಮೋದನೆ ನೀಡಿದೆ.
ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ವಿದೇಶಿ ದೇಣಿಯ ಬಳಕೆಯು ಪಾರದರ್ಶಕವಾಗಿರಲು ಹಾಗೂ ಲೆಕ್ಕಾಚಾರ ಹೊಂದಿರಲು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಗೆ (ಎಫ್‌ಸಿಆರ್‌ಎ) ತರಲಾಗಿರುವ ತಿದ್ದುಪಡಿ ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಹೇಳಿತ್ತು.
ಎಫ್‌ಸಿಆರ್‌ಎ ತಿದ್ದುಪಡಿಗೆ ಮೇಲ್ಮನೆಯಿಂದ ಅನುಮೋದನೆ ಪಡೆದು ಅದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಕಿತ ದೊರೆತರೆ, ಸಾರ್ವಜನಿಕ ಸೇವೆಯಲ್ಲಿರುವವರು ವಿದೇಶಿ ದೇಣಿಗೆ ಪಡೆಯುವುದಕ್ಕೆ ನಿರ್ಬಂಧ ಬೀಳಲಿದೆ. ಹಾಗೂ ವಿದೇಶಿ ಮೂಲಗಳಿಂದ ದೇಣಿಗೆ ಪಡೆಯಲಿರುವ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಾಗಲಿದೆ.
ಕಾಯ್ದೆಗೆ ತಿದ್ದುಪಡಿಯಿಂದಾಗಿ ಸ್ವೀಕರಿಸಲಾಗುವ ವಿದೇಶಿ ದೇಣಿಗೆಯಲ್ಲಿ ಆಡಳಿತಾತ್ಮಕ ಉದ್ದೇಶಗಳಿಗೆ ಶೇ 50ರಷ್ಟು ಬದಲು ಶೇ 20ರಷ್ಟು ಮೊತ್ತವನ್ನಷ್ಟೇ ಬಳಸಲು ಅವಕಾಶವಿರುತ್ತದೆ.
ಮೇ 1, 2011ರಂದು ಕಾಯ್ದೆ ಜಾರಿಗೆ ಬಂದಿದ್ದು, ಈವರೆಗೆ ಎರಡು ಬಾರಿ ತಿದ್ದುಪಡಿಯಾಗಿದೆ. ಮೊದಲ ಬಾರಿ 2016ರಲ್ಲಿ ಹಣಕಾಸು ಕಾಯ್ದೆ 2016ರ ವಿಧಿ 236 ಹಾಗೂ ಎರಡನೇ ಬಾರಿಗೆ 2018ರಲ್ಲಿ ಸೆಕ್ಷನ್ 220ಕ್ಕೆ ತಿದ್ದುಪಡಿ ಆಗಿದೆ.
ಅಂಕಿ-ಅಂಶಗಳ ಪ್ರಕಾರ, 2016-17 ಮತ್ತು 2018-19ರ ಅವಧಿಯಲ್ಲಿ ವಿವಿಧ ನೋಂದಾಯಿತ ಸೇವಾ ಸಂಸ್ಥೆಗಳು ಒಟ್ಟು ₹58,000 ಕೋಟಿ ವಿದೇಶಿ ದೇಣಿಗೆಯನ್ನು ಸ್ವೀಕರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.