ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಆತ್ಮಾಹುತಿ ದಾಳಿ ನಡೆಸುವುದಕ್ಕಾಗಿ ಜೈಷ್- ಎ- ಮೊಹಮ್ಮದ್ ಉಗ್ರಸಂಘಟನೆ ಸಂಚು ನಡೆಸಿದೆ ಎಂಬ ಗುಪ್ತಚರ ಮಾಹಿತಿ ನಮಗೆ ಲಭಿಸಿತ್ತು ಎಂದುವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಗೋಖಲೆ, ಬಲಾಕೋಟ್‍ನಲ್ಲಿರುವ ಜೈಷೆ ಉಗ್ರ ಸಂಘಟನೆಯ ಬೃಹತ್ ಶಿಬಿರದ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದೆ.
ಮುಂಜಾನೆ ವೇಳೆ ಭಾರತ ಬಲಾಕೋಟ್‍ನಲ್ಲಿರುವ ಜೈಷ್- ಎ-ಮೊಹಮ್ಮದ್ ಶಿಬಿರದ ಮೇಲೆ ದಾಳಿ ನಡೆಸಿ ಜೈಷ್- ಎ-ಮೊಹಮ್ಮದ್ ಸಂಘಟನೆಯ ಉಗ್ರರು, ತರಬೇತಿದಾರರು, ಹಿರಿಯ ಕಮಾಂಡರ್ ಮತ್ತು ಜಿಹಾದಿಗಳನ್ನು ಹತ್ಯೆ ಮಾಡಿದೆ.
ಜೈಷೆ ಮುಖಂಡ ಮಸೂದ್ ಅಜರ್‌ನ ಭಾವ ಮೌಲಾನ ಯೂಸಫ್ ಅಜರ್ ಅಲಿಯಾಸ್ ಉಸ್ತಾದ್ ಘೌರಿ ಈ ಉಗ್ರ ಶಿಬಿರದ ನೇತೃತ್ವ ವಹಿಸಿದ್ದರು.
ಭಯೋತ್ಪಾದನೆ ನಿರ್ಮೂಲನೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವ ಕಾರ್ಯಕ್ಕೆ ಭಾರತ ಕಂಕಣಬದ್ಧವಾಗಿದೆ. ಈ ಕಾರ್ಯಾಚರಣೆ ಜೈಷೆ ಸಂಘಟನೆಯ ಶಿಬಿರಗಳನ್ನೇ ಗುರಿಯಾಗಿರಿಸಿ ಮಾಡಲಾಗಿದೆ. ನಾಗರಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಗೋಖಲೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.