ನವದೆಹಲಿ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಭಾರತ ಹಾಗೂ ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧದ ಕುರಿತು ಸಂಸದೀಯ ಸಮಿತಿಗೆ ಅಕ್ಟೋಬರ್ 6 ರಂದು ವಿವರ ನೀಡುವ ಸಾಧ್ಯತೆ ಇದೆ.
ಪೂರ್ವ ಲಡಾಖ್‌ನಲ್ಲಿ ನಿಯೋಜಿಸಿದ್ದ ಸೇನಾ ಪಡೆಗಳ ವಾಪಸಾತಿ ಹಾಗೂ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಗಸ್ತು ತಿರುಗುವುದನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಚೀನಾದೊಂದಿಗೆ ಇತ್ತೀಚೆಗೆ ಮಾಡಿಕೊಂಡ ಒಪ್ಪಂದದ ನಂತರದ ಬೆಳವಣಿಗೆ ಬಗ್ಗೆಯೂ ಮಾಹಿತಿ ನೀಡುವ ಸಾಧ್ಯತೆ ಇದೆ.
2023ರ ಜೂನ್‌ನಲ್ಲಿ ಕೆನಡಾದಲ್ಲಿ ನಡೆದಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಪಾತ್ರದ ಬಗ್ಗೆ ವಿಶ್ವಾಸಾರ್ಹ ಪುರಾವೆಗಳು ಇವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವರ್ಷದ ಹಿಂದೆ ಹೇಳಿದ್ದರು.
ಇದು ಎರಡೂ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧವನ್ನು ಹದಗೆಡಿಸಿದೆ.
ಭಾರತವು 'ಖಾಲಿಸ್ತಾನಿ ಭಯೋತ್ಪಾದಕ' ಎಂದು ಘೋಷಿಸಿರುವ ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ 2023ರ ಜೂನ್‌ನಲ್ಲಿ ಹತ್ಯೆಯಾಗಿದ್ದ.
ಆ ಪ್ರಕರಣದ ವಿಚಾರಣೆಗೆ ಭಾರತದ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನು ಒಳಪಡಿಸುವುದಾಗಿ ಕೆನಡಾ ಸರ್ಕಾರ ಇತ್ತೀಚೆಗೆ ಹೇಳಿತ್ತು. ಅದರ ಬೆನ್ನಲ್ಲೇ ಕೆನಡಾದಲ್ಲಿ ಭಾರತದ ರಾಯಭಾರಿಯಾಗಿದ್ದ ಸಂಜಯ್ ಕುಮಾರ್ ವರ್ಮಾ ಹಾಗೂ ಇತರ ಐವರು ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಅದೇರೀತಿ, ಕೆನಡಾದ ರಾಜತಾಂತ್ರಿಕರನ್ನೂ ವಾಪಸ್ ಕಳುಹಿಸಲಾಗಿದೆ.
ಏತನ್ಮಧ್ಯೆ, ಸಿಖ್ ಪ್ರತ್ಯೇಕತಾವಾದಿಗಳ ಹತ್ಯೆ ಸಂಚಿನಲ್ಲಿ ಅಮಿತ್ ಶಾ ಅವರ ಕೈವಾಡವಿದೆ ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್ ಮಾರಿಸನ್ ಇತ್ತೀಚೆಗೆ ಆರೋಪಿಸಿದ್ದಾರೆ. ಇದರಿಂದ, ಪರಿಸ್ಥಿತಿ ಇನ್ನಷ್ಟು ಜಟಿಲಗೊಂಡಿದೆ.
ಖಲಿಸ್ತಾನ ಪರ ಸಂಘಟನೆಗಳು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಕೆನಡಾ ಅವಕಾಶ ಮಾಡಿಕೊಟ್ಟಿರುವುದು ಉಭಯ ದೇಶಗಳ ನಡುವೆ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಭಾರತ ಪ್ರತಿಪಾದಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.