ನವದೆಹಲಿ: ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಭಾರತವು ಮಹತ್ವದ ಮುನ್ನಡೆ ಸಾಧಿಸಿದೆ. ಕಳೆದ 15 ವರ್ಷಗಳಲ್ಲಿ ದೇಶದ ಅರಣ್ಯ ಪ್ರದೇಶ ವಿಸ್ತರಣೆಯಾಗಿದೆ ಎಂದು ವಿಶ್ವಸಂಸ್ಥೆಯ ಅರಣ್ಯಗಳಿಗೆ ಸಂಬಂಧಿಸಿದ ವೇದಿಕೆಯು (ಯುಎನ್‌ಎಫ್‌ಎಫ್) ಭಾರತಕ್ಕೆ ತಿಳಿಸಿದೆ.
ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮೇ 6ರಿಂದ 10ರವರೆಗೆ ಯುಎನ್‌ಎಫ್‌ಎಫ್ ಆಯೋಜಿಸಿದ್ದ 19ನೇ ಸಮ್ಮೇಳನದಲ್ಲಿ ಭಾರತ ಭಾಗವಹಿಸಿತ್ತು. ಈ ವೇಳೆ, 2010ರಿಂದ 2020ರ ವರೆಗಿನ ಅರಣ್ಯ ಪ್ರದೇಶದ ವಿಸ್ತರಣೆಯ ವಾರ್ಷಿಕ ಸರಾಸರಿಯಲ್ಲಿ ಭಾರತವು ಮೂರನೇ ರ್‍ಯಾಂಕ್ ಪಡೆಯಿತು.
ವನ್ಯಜೀವಿ ಧಾಮಗಳು, ರಾಷ್ಟ್ರೀಯ ಉದ್ಯಾನಗಳು, ಹುಲಿ ಅಭಯಾರಣ್ಯ, ಜೀವಮಂಡಲ ಸಂರಕ್ಷಿತ ಪ್ರದೇಶಗಳನ್ನು ವಿಸ್ತರಿಸುವ ಮೂಲಕ ದೇಶವು ವನ್ಯಜೀವಿ ಸಂರಕ್ಷಣೆ ಮತ್ತು ಜೀವ ವೈವಿಧ್ಯಕ್ಕೆ ಹೆಚ್ಚಿನ ಮಹತ್ವ ನೀಡಿದೆ ಎಂದು ಭಾರತವು ಸಮ್ಮೇಳನದಲ್ಲಿ ಹೇಳಿತು.
‘ಪ್ರಾಜೆಕ್ಟ್ ಟೈಗರ್’ ಯೋಜನೆಯ 50ನೇ ವಾರ್ಷಿಕೋತ್ಸವ ಮತ್ತು ‘ಪ್ರಾಜೆಕ್ಟ್ ಎಲಿಫ್ಯಾಂಟ್’ನ 30ನೇ ವಾರ್ಷಿಕೋತ್ಸವವನ್ನು ಈಚೆಗೆ ಆಚರಿಸಲಾಯಿತು. ಇದು ಪ್ರಬೇಧಗಳನ್ನು ಸಂರಕ್ಷಿಸುವಲ್ಲಿ ಭಾರತದ ಬದ್ಧತೆಯನ್ನು ತೋರುತ್ತದೆ ಎಂದು ಪರಿಸರ ಸಚಿವಾಲಯವು ಪ್ರಕಟಣೆಯೊಂದರಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.