ನವದೆಹಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಿಂದ (ಸಿಐಎಸ್‌ಎಫ್) ಮಹಿಳಾ ತುಕಡಿಯೊಂದನ್ನು ರಚಿಸಲಾಗುವುದು. ಶೀಘ್ರದಲ್ಲಿ ಈ ತುಕಡಿಯ ಸಿಬ್ಬಂದಿ ಕಮಾಂಡೊಗಳಾಗಿ ರೈಲು, ವಿಮಾನ ನಿಲ್ದಾಣ ಹಾಗೂ ಮೆಟ್ರೊ ರೈಲುಗಳಂತಹ ದೇಶದ ಪ್ರಮುಖ ಮೂಲಸೌಕರ್ಯ ಗಳನ್ನು ರಕ್ಷಿಸುವ ಮತ್ತು ವಿಐಪಿಗಳಿಗೆ ಭದ್ರತೆ ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಹಿರಿಯ ಕಮಾಂಡೆಂಟ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ 1025 ಸಿಬ್ಬಂದಿಯನ್ನು ಒಳಗೊಂಡ ವಿಶೇಷ ಮಹಿಳಾ ಮೀಸಲು ಪಡೆ ರಚನೆಯನ್ನು ಮಂಜೂರು ಮಾಡಿ ಗೃಹ ಸಚಿವಾಲಯವು ಸೋಮವಾರ ಆದೇಶ ಹೊರಡಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, ‘ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಸಿಐಎಸ್‌ಎಫ್‌ನಿಂದ ಸಂಪೂರ್ಣ ಮಹಿಳಾ ತುಕಡಿಯ ರಚನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ನಿರ್ಧಾರವು ರಾಷ್ಟ್ರವನ್ನು ರಕ್ಷಿಸುವ ನಿರ್ಣಾಯಕ ಕಾರ್ಯಗಳಲ್ಲಿ ಭಾಗವಹಿಸಬೇಕೆಂಬ ಹೆಚ್ಚಿನ ಮಹಿಳೆಯರ ಆಕಾಂಕ್ಷೆ ಗಳನ್ನು ಈಡೇರಿಸುತ್ತದೆ. ಅಲ್ಲದೇ ಈ ತುಕಡಿಯನ್ನು ದೊಡ್ಡ ಪಡೆಯನ್ನಾಗಿ ಬೆಳೆಸಲಾಗುವುದು’ ಎಂದಿದ್ದಾರೆ.
ಸಿಐಎಸ್‌ಎಫ್‌ನಲ್ಲಿ ಒಟ್ಟು 1.77 ಲಕ್ಷ ಸಿಬ್ಬಂದಿ ಇದ್ದು, ಇದರಲ್ಲಿ ಶೇ7ರಷ್ಟು ಮಹಿಳೆಯರಿದ್ದಾರೆ. ಹೊಸದಾಗಿ ರಚನೆಯಾಗುತ್ತಿರುವುದು ಸಿಐಎಸ್‌ಎಫ್‌ನ 13ನೇ ತುಕಡಿಯಾಗಿರುತ್ತದೆ. ಇದರ ನೇಮಕಾತಿ, ತರಬೇತಿ ಹಾಗೂ ಅಗತ್ಯ ಸ್ಥಳವನ್ನು ಆಯ್ಕೆ ಮಾಡಲು ಸಿದ್ಧತೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.