ADVERTISEMENT

ದ್ವೇಷ ಭಾಷಣ | ಬಿಜೆಪಿ ವಿರುದ್ಧ ಕಠಿಣ ಕ್ರಮ ಏಕಿಲ್ಲ: ಮಾಜಿ ಅಧಿಕಾರಿಗಳ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 25 ಮೇ 2024, 13:47 IST
Last Updated 25 ಮೇ 2024, 13:47 IST
   

ನವದೆಹಲಿ: ಬಿಜೆಪಿ ನಾಯಕರ ದ್ವೇಷ ಭಾಷಣದ ವಿಚಾರದಲ್ಲಿ ಅಲ್ಪ ಮಟ್ಟದಲ್ಲಿ ಮಾತ್ರ ಕ್ರಮ ಕೈಗೊಂಡಿರುವುದು ಏಕೆ, ಮತದಾನ ಪ್ರಮಾಣದ ನಿರ್ದಿಷ್ಟ ಅಂಕಿ–ಅಂಶವನ್ನು ಪ್ರಕಟಿಸದೆ ಇರುವುದು ಏಕೆ ಎಂಬುದನ್ನು ಬಹಿರಂಗವಾಗಿ ವಿವರಿಸುವಂತೆ ಕೋರಿ ಸರಿಸುಮಾರು ನೂರು ಮಂದಿ ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಚುನಾವಣಾ ಆಯೋಗವನ್ನು ‍ಪ್ರಶ್ನಿಸಿದ್ದಾರೆ.

ಚುನಾವಣಾ ಆಯೋಗವು ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಹಿಂದೇಟು ಹಾಕುತ್ತಿದೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

ರಾಜಕೀಯೇತರ ಸಂಘಟನೆಯಾದ ‘ಕಾನ್ಸ್ಟಿಟ್ಯೂಷನಲ್ ಕಾಂಡಕ್ಟ್ ಗ್ರೂಪ್‌’ನ (ಸಿಸಿಜಿ) ಸದಸ್ಯರು ಇವರು. ಮತ ಎಣಿಕೆಯ ದಿನ (ಜೂನ್ ‌4) ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಆಯೋಗವು ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಸುರಕ್ಷಿತವಾಗಿ ಇರಿಸಲು ಕ್ರಮ ಕೈಗೊಳ್ಳಬೇಕು, ಚುನಾವಣಾ ಅಧಿಕಾರಿಗಳು ಫಲಿತಾಂಶವನ್ನು ಘೋಷಿಸುವಲ್ಲಿ ವಿಳಂಬ ಮಾಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ಚುನಾವಣೆಯು ಮುಕ್ತವಾಗಿ ಹಾಗೂ ನ್ಯಾಯಯುತವಾಗಿ ನಡೆಯುವಂತೆ ನೋಡಿಕೊಳ್ಳುವ ಸಾಂವಿಧಾನಿಕ ಹೊಣೆ ಇರುವ ಸಂಸ್ಥೆಗಳಿಗೆ ಇದು ಪರೀಕ್ಷೆಯ ಕಾಲ ಎಂದು ಅವರು ನೆನಪಿಸಿದ್ದಾರೆ. ಪತ್ರಕ್ಕೆ ಮಾಜಿ ಅಧಿಕಾರಿಗಳಾದ ವಜಾಹತ್ ಹಬೀಬ್–ಉಲ್ಲಾ, ಶಿವಶಂಕರ್ ಮೆನನ್, ಜಿ.ಕೆ. ಪಿಳ್ಳೈ, ಕೆ. ಸುಜಾತಾ ರಾವ್ ಮತ್ತಿತರರು ಸಹಿ ಮಾಡಿದ್ದಾರೆ.

ಚುನಾವಣೆಯು ಎಷ್ಟರಮಟ್ಟಿಗೆ ನ್ಯಾಯಸಮ್ಮತವಾಗಿರುತ್ತದೆ ಎಂಬ ವಿಚಾರವಾಗಿ ಕಳವಳಗಳನ್ನು ಹಲವು ಸಂದರ್ಭಗಳಲ್ಲಿ ವ್ಯಕ್ತಪಡಿಸಲಾಗಿದೆ. ಈ ಕಳವಳಗಳು ಇವಿಎಂ ಹಾಗೂ ವಿವಿ–ಪ್ಯಾಟ್ ಯಂತ್ರಗಳನ್ನು ತಿರುಚುವ ಸಾಧ್ಯತೆ, ಹಲವರ ಪರವಾಗಿ ಒಬ್ಬನೇ ವ್ಯಕ್ತಿ ಮತ ಚಲಾಯಿಸಿದ್ದು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರುಗಳು ಕಾಣೆಯಾಗಿದ್ದರ ಬಗ್ಗೆ ಇವೆ ಎಂದು ಅವರು ಹೇಳಿದ್ದಾರೆ.

‘ಮತದಾರರಲ್ಲಿನ ಆತಂಕಗಳನ್ನು ನಿವಾರಿಸಲು, ಈ ಸಮಸ್ಯೆಗಳ ಬಗ್ಗೆ ಕೈಗೊಂಡ ಹಾಗೂ ಕೈಗೊಳ್ಳದೆ ಇರುವ ಕ್ರಮಗಳನ್ನು ಆಯೋಗವು ಸಾರ್ವಜನಿಕವಾಗಿ ವಿವರಿಸುವುದು ಸೂಕ್ತವಾಗುತ್ತದೆ. ಆಯೋಗವು ಇನ್ನು ಯಾವುದೇ ವಿಳಂಬ ಇಲ್ಲದೆ ಈ ಕೆಲಸವನ್ನು ಪಾರದರ್ಶಕವಾಗಿ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.