ನವದೆಹಲಿ: ಇಸ್ರೇಲ್‌ನ ಭದ್ರತಾ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ಅಭಿವೃದ್ಧಿಪಡಿಸಿರುವ ಪೆಗಾಸಸ್ ಕುತಂತ್ರಾಂಶದ ಮೂಲಕ ಉದ್ಯಮಿ ಅನಿಲ್ ಅಂಬಾನಿ ಹಾಗೂ ಅವರ ನಿಕಟವರ್ತಿ ಟೋನಿ ಜೇಸುದಾಸನ್ ಮೇಲೆ ಗೂಢಚರ್ಯೆ ನಡೆಸಲಾಗಿತ್ತು ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಫೇಲ್ ಒಪ್ಪಂದದ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ:ಆಳ–ಅಗಲ| ಪೆಗಾಸಸ್ ಕಣ್ಗಾವಲು ಕೋಟೆ ಬಯಲು
ಸಿಬಿಐನ ಮಾಜಿ ನಿರ್ದೇಶಕ ಅಲೋಕ್ ವರ್ಮಾ, ಬಿಎಸ್‌ಎಫ್ ಮುಖ್ಯಸ್ಥ, ಐಪಿಎಸ್ ಅಧಿಕಾರಿ, ರಫೇಲ್ ತಯಾರಿಸುವ ಡಾಸೊ ಏವಿಯೇಷನ್ ಮತ್ತು ಬೋಯಿಂಗ್ ಕೂಡಾ ಪೆಗಾಸಸ್ ಕಣ್ಗಾವಲಿನ ಪಟ್ಟಿಯಲ್ಲಿವೆ.
ಸೋರಿಕೆಯಾದ ದತ್ತಾಂಶವನ್ನು ಪ್ಯಾರಿಸ್ ಮೂಲದ ಲಾಭೋದ್ದೇಶವಿಲ್ಲದ ಮಾಧ್ಯಮ ಸಂಸ್ಥೆ ಫಾರ್ಬಿಡೆನ್ ಸ್ಟೋರಿಸ್, ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್ ಹಾಗೂ ದಿ ವೈರ್ ಸುದ್ದಿ ಸಂಸ್ಧೆಗಳೊಂದಿಗೆ ಹಂಚಿಕೊಂಡಿದೆ.
2018ರಲ್ಲಿ ಮೋದಿ ಸರ್ಕಾರವು 36 ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದವು ವಿವಾದಕ್ಕೀಡಾದಾಗ ಅನಿಲ್ ಅಂಬಾನಿ ಹಾಗೂ ಜೆಸುದಾಸನ್ ಮತ್ತು ಪತ್ನಿಯ ಫೋನ್ ನಂಬರ್‌ಗಳನ್ನು ಗೂಢಚರ್ಯೆ ನಡೆಸಲಾಗಿತ್ತು ಎಂದು ವರದಿಯು ತಿಳಿಸುತ್ತದೆ.
'ಸಾಬ್ ಇಂಡಿಯಾ' ಮಾಜಿ ಮುಖ್ಯಸ್ಥ ಇಂದ್ರಜಿತ್ ಸಿಯಾಲ್, ಬೋಯಿಂಗ್ ಇಂಡಿಯಾ ಮುಖ್ಯಸ್ಥ ಪ್ರತ್ಯುಷ್ ಕುಮಾರ್ ಮತ್ತು ರಕ್ಷಣಾ ಕ್ಷೇತ್ರದ ಎರಡು ಪ್ರಮುಖ ಅಧಿಕಾರಿಗಳ ಹೆಸರುಗಳು ಸೋರಿಕೆಯಾದ ಪಟ್ಟಿಯಲ್ಲಿವೆ. ಇದರಲ್ಲಿ ಒಬ್ಬರು ಭಾರತೀಯ ರಕ್ಷಣಾ ಲೆಕ್ಕಪತ್ರ ಸೇವೆಗಳ ಅಧಿಕಾರಿ ಮತ್ತು ಇನ್ನೊಬ್ಬರು ರಕ್ಷಣಾ ಸಚಿವಾಲಯದ ಅಧಿಕಾರಿ ಪ್ರಶಾಂತ್ ಸುಕುಲ್ ಆಗಿದ್ದಾರೆ. ಇದು ರಫೇಲ್ ಒಪ್ಪಂದದ ವ್ಯವಹಾರದ ಮೇಲಿನ ಗೂಢಚರ್ಯೆಯನ್ನು ಬಹಿರಂಗಪಡಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.