ನವದೆಹಲಿ: ಅಪರಾಧ ಕಾನೂನುಗಳಿಗೆ ಬದಲಾಗಿ ಹೊಸ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿರುವ ಮೂರು ಮಸೂದೆಗಳ ಬಗ್ಗೆ ಕಾನೂನು ಪರಿಣತರಿಂದ ಹೆಚ್ಚಿನ ವಿವರಣೆ ಬೇಕಿದೆ ಎಂದು ಸಂಸದೀಯ ಸ್ಥಾಯಿಸಮಿತಿ ಸಭೆಯಲ್ಲಿರುವ ಪ್ರತಿಪಕ್ಷಗಳ ಸಂಸದರು ಕೋರಿದ್ದಾರೆ.
ಇಂಡಿಯನ್ ಪೀನಲ್ ಕೋಡ್ (ಭಾರತೀಯ ದಂಡ ಸಂಹಿತೆ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಮಸೂದೆ, ಕ್ರಿಮಿನಲ್ ಪ್ರೊಸೀಜರ್ ಆ್ಯಕ್ಟ್ (ಅಪರಾಧ ಪ್ರಕ್ರಿಯಾ ಸಂಹಿತೆ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆ ಮತ್ತು ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ (ಭಾರತೀಯ ಸಾಕ್ಷ್ಯ ಕಾಯ್ದೆ) ಬದಲಿಗೆ ಭಾರತೀಯ ಸಾಕ್ಷ್ಯ ಮಸೂದೆಯನ್ನು ಕೇಂದ್ರ ಗೃಹ ಸಚಿವಾಲಯವು ಮಂಡಿಸಿದೆ. ಇವುಗಳ ಬಗ್ಗೆ ಸ್ಥಾಯಿಸಮಿತಿಯಿಂದ ಪರಾಮರ್ಶೆಯೂ ಆರಂಭವಾಗಿದೆ.
ಬುಧವಾರ ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ಸಿಜೆಐ ಯು.ಯು. ಲಲಿತ್, ನಿವೃತ್ತ ನ್ಯಾಯಮೂರ್ತಿ ಮದನ್ ಲೋಕೂರ್ ಸೇರಿದಂತೆ ಹಲವು ತಜ್ಞರಿಂದ ಸಮಿತಿಯ ಸದಸ್ಯರಿಗೆ ಮಸೂದೆಗಳ ಬಗ್ಗೆ ಮನದಟ್ಟು ಮಾಡಿಕೊಡುವ ಅಗತ್ಯವಿರುವ ಬಗ್ಗೆ ಸಂಸದರು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಸದರು ಹೆಸರಿಸಿರುವ 16 ತಜ್ಞರ ಪಟ್ಟಿಯಲ್ಲಿ ಹಿರಿಯ ವಕೀಲ ಪಾಲಿ ಎಸ್. ನಾರಿಮನ್, ವಕೀಲೆ ಮೇನಕಾ ಗುರುಸ್ವಾಮಿ, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳು, ವಕೀಲರ ಸಂಘದ ಸದಸ್ಯರು, ಕಾನೂನು ಪಂಡಿತರು, ಬಂದೀಖಾನೆ ಅಧಿಕಾರಿಗಳು, ಸಮಾಜ ಸುಧಾರಣೆಗೆ ಶ್ರಮಿಸುತ್ತಿರುವ ಕಾರ್ಯಕರ್ತರು, ಧಾರ್ಮಿಕ ನಾಯಕರು ಹಾಗೂ ಸೈಬರ್ ಅಪರಾಧ ತಜ್ಞರು ಕೂಡ ಇದ್ದಾರೆ.
‘ಸದ್ಯ ಮಸೂದೆಗಳ ಬಗ್ಗೆ ನಡೆಯುತ್ತಿರುವ ಪರಾಮರ್ಶೆಯು ಇದೇ ವೇಗದಲ್ಲಿ ಸಾಗಿದರೆ ಅಂತಿಮಗೊಳ್ಳಲು ಒಂದೂವರೆ ವರ್ಷ ಹಿಡಿಯಲಿದೆ’ ಎಂದು ಪ್ರತಿಪಕ್ಷದ ಸಂಸದರೊಬ್ಬರು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ, ತರಾತುರಿಯಲ್ಲಿ ಪರಿಶೀಲನೆಯನ್ನು ಪೂರ್ಣಗೊಳಿಸಿದರೆ ದೀರ್ಘಕಾಲದಲ್ಲಿ ಮಸೂದೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಇದೇ ವೇಳೆ ಕೆಲವು ಸಂಸದರು ಹೇಳಿದ್ದಾರೆ. ಮಸೂದೆಯಲ್ಲಿ ಪ್ರಸ್ತಾಪಿಸಿರುವ ಜೀರೊ ಎಫ್‌ಐಆರ್, ಇ–ಎಫ್‌ಐಆರ್ ಪ್ರಕ್ರಿಯೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.