ಗಾಂಧಿನಗರ: ಎರಡು ವಾರಗಳ ಹಿಂದಷ್ಟೇ ಕಾಂಗ್ರೆಸ್ ತೊರೆದಿದ್ದ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಅವರು ಗುರುವಾರ ಬಿಜೆಪಿಗೆ ಸೇರ್ಪಡೆ ಆದರು. ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಈ ಬೆಳವಣಿಗೆ ನಡೆದಿದೆ.
ಗಾಂಧಿನಗರದಲ್ಲಿರುವ ಗುಜರಾತ್‌ನ ಬಿಜೆಪಿ ಘಟಕದ ಮುಖ್ಯ ಕಚೇರಿ
‘ಕಮಲಮ್’ನಲ್ಲಿ ನಡೆದ ಸಮಾ
ರಂಭದಲ್ಲಿ ಬಿಜೆಪಿ ಗುಜರಾತ್ ಘಟಕದ ಅಧ್ಯಕ್ಷ ಸಿ. ಆರ್. ಪಾಟೀಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಹಾರ್ದಿಕ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.ಹಾರ್ದಿಕ್ ಜೊತೆ ಕಾಂಗ್ರೆಸ್‌ನ ಮತ್ತೊಬ್ಬ ನಾಯಕಿ ಶ್ವೇತಾ ಬ್ರಹ್ಮಭಟ್ (35) ಅವರು ಕೂಡಾ ಬಿಜೆಪಿ ಸೇರಿದರು. ಶ್ವೇತಾ ಅವರು 2017ರ ವಿಧಾನಸಭೆ ಚುನಾವಣೆಯಲ್ಲಿ ಮಣಿನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಆಡಳಿತಾರೂಢ ಬಿಜೆಪಿ ಸೇರಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾರ್ದಿಕ್, ‘ಬಿಜೆಪಿಯು ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುತ್ತದೆ. ನಾನು ಟಿಕೆಟ್ ಆಕಾಂಕ್ಷಿ ಅಲ್ಲ. ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಮತ್ತು ಸೈನಿಕನಾಗಿ ಕೆಲಸ ಮಾಡುತ್ತೇನೆ. ಜನರ ಭಾವನೆಗಳನ್ನು ಕಾಂಗ್ರೆಸ್ ಗೌರವಿಸುವುದಿಲ್ಲ. ಬಿಜೆಪಿ ಸೇರಿ ದೇಶಕ್ಕೆ ಕೊಡುಗೆ ನೀಡುವಂತೆ ಇತರ ಪಕ್ಷಗಳ ಮುಖಂಡರಿಗೂ ನಾನು ಮನವಿ ಮಾಡಿದ್ದೇನೆ’ ಎಂದರು.
‘ನಿಮ್ಮ ಮೇಲಿರುವ ದೇಶದ್ರೋಹದ ಆರೋಪದಿಂದ ಬಿಡುಗಡೆ ಪಡೆಯಲು ಮತ್ತು ನೀವು ದೇಶಭಕ್ತ ಎಂದು ಸಾಬೀತುಪಡಿಸುವ ಸಲುವಾಗಿ ಬಿಜೆಪಿ ಸೇರಿದ್ದೀರಾ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಯಾವಾಗಲೂ ದೇಶಭಕ್ತನೇ ಮತ್ತು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇನೆ. ಕಾಶ್ಮೀರದ ವಿಶೇಷ ಸ್ಥಾನ
ರದ್ದುಪಡಿಸಿದ್ದಕ್ಕಾಗಿ ಮತ್ತು ರಾಮ
ಮಂದಿರ ವಿಚಾರದಲ್ಲಿ ತೆಗೆದುಕೊಂಡ ನಿರ್ಣಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನಾನು ಕಾಂಗ್ರೆಸ್
ನಲ್ಲಿ ಇದ್ದಾಗಲೂ ಹೊಗಳಿದ್ದೆ’ ಎಂದರು.
ಪಾಟೀದಾರ್ ಮೀಸಲಾತಿ ಹೋರಾಟದ ವೇಳೆ ಉಂಟಾದ ಸಾರ್ವಜನಿಕ ಆಸ್ತಿ ಹಾನಿ ಕುರಿತು ಕ್ಷಮೆ ಯಾಚಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಜನರಿಗಾಗಿ ಆ ಹೋರಾಟ ನಡೆಸಿದ್ದು. ಹಾಗಾಗಿ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ. ಈ ಹೋರಾಟದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ 10ರಷ್ಟು ಮೀಸಲಾತಿ ನೀಡಿದ್ದಾರೆ’ ಎಂದರು.
ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ 2015ರಲ್ಲಿ ನಡೆದಿದ್ದ ಹೋರಾಟವನ್ನು ಹಾರ್ದಿಕ್ ಅವರು ಮುನ್ನಡೆಸಿದ್ದರು. ಹೋರಾಟದ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮತ್ತು ಜೀವಹಾನಿ ಆಗಿತ್ತು ಎಂಬ ಕಾರಣಕ್ಕೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ಸೇರಿ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿತ್ತು. 2019ರಲ್ಲಿ ಅವರು ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಕಳೆದ ಮೇ 18ರಂದು ಅವರು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.