ಮುಂಬೈ: ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಐಷಾರಾಮಿ ಮನೆ ‘ಆಂಟಿಲಿಯಾ’ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಸ್ಕಾರ್ಪಿಯೊ ಕಾರಿನಲ್ಲಿ ಸ್ಫೋಟಕ ಪತ್ತೆಯಾಗಿದ್ದ ಹಾಗೂ ಆಟೊಮೊಬೈಲ್ ಬಿಡಿಭಾಗಗಳ ಡೀಲರ್ ಮನ್‌ಸುಖ್ ಹಿರಾನಿ ಅವರ ನಿಗೂಢ ಸಾವು ಪ್ರಕರಣದ ಆರೋಪಿಯಾಗಿರುವ ಪೊಲೀಸ್ ಇಲಾಖೆಯ ಮಾಜಿ ಸಿಬ್ಬಂದಿ ಸುನೀಲ್ ಮಾನೆ, ಈ ಪ್ರಕರಣದ ಮಾಫಿ ಸಾಕ್ಷಿಯಾಗಲು ನಿರಾಕರಿಸಿದ್ದಾರೆ.
ಈ ಸಂಬಂಧ ಅವರು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಹಿಂದಕ್ಕೆ ಪಡೆದಿದ್ದಾರೆ.
‘ನನಗೆ ತಪ್ಪಿನ ಅರಿವಾಗಿದೆ. ಪೊಲೀಸ್ ಇಲಾಖೆಗೆ ಸಲ್ಲಿಸಿರುವ ಕೊಡುಗೆಯನ್ನು ಪರಿಗಣಿಸಿ ನ್ಯಾಯಾಲಯವು ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಕಲ್ಪಿಸಬೇಕು. ಪ್ರಕರಣದ ಮಾಫಿ ಸಾಕ್ಷಿಯಾಗಲು ಅನುವು ಮಾಡಿಕೊಡಬೇಕು’ ಎಂದು ಮಾನೆ ಅವರು ಜನವರಿಯಲ್ಲಿ ನೀಡಿದ್ದ ಲಿಖಿತ ಪತ್ರದಲ್ಲಿ ಹೇಳಿದ್ದರು.
‘ನಾನು ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಬಯಸುತ್ತೇನೆ’ ಎಂದು ಮಂಗಳವಾರ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಹೇಳಿದರು. ಹೀಗಾಗಿ ನ್ಯಾಯಾಲಯವು ಅರ್ಜಿ ವಜಾಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.