ತಿರುಪತಿ: ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಇಂದು (ಶನಿವಾರ) ತಿರುಮಲದಲ್ಲಿರುವ ಪ್ರಸಿದ್ಧ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಗೌತಮ್ ಗಂಭೀರ್ ತಿರುಪತಿಗೆ ಭೇಟಿ ನೀಡಿರುವ ವಿಡಿಯೊವನ್ನು ಸುದ್ದಿಸಂಸ್ಥೆ ಎಎನ್‌ಐ ‘ಎಕ್ಸ್’ನಲ್ಲಿ ಹಂಚಿಕೊಂಡಿದೆ.
ಪೂರ್ವ ದೆಹಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯದಿರಲು ನಿರ್ಧರಿಸಿರುವುದಾಗಿ ಇತ್ತೀಚೆಗೆ ಹೇಳಿದ್ದರು.
ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದು, ಅಭ್ಯರ್ಥಿಗಳ ಪಟ್ಟಿಯಿಂದ ತಮ್ಮ ಹೆಸರು ಕೈಬಿಡುವಂತೆ ಮನವಿ ಮಾಡಿರುವುದಾಗಿ ಗಂಭೀರ್ ತಿಳಿಸಿದ್ದರು.
‘ಕ್ರಿಕೆಟ್ ಸಂಬಂಧಿತ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸುವ ಸಲುವಾಗಿ ಪಕ್ಷದ ರಾಜಕೀಯ ಕರ್ತವ್ಯಗಳಿಂದ ತನ್ನನ್ನು ಮುಕ್ತಗೊಳಿಸುವಂತೆ ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
‘ಕಳೆದ 10 ವರ್ಷಗಳಿಂದ ಹಜಾರಿಬಾಗ್ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸುವ ಸುಯೋಗ ಹೊಂದಿದ್ದೇನೆ. ಮೇಲಾಗಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ನಾಯಕತ್ವದಿಂದ ನನಗೆ ಆಶೀರ್ವಾದ ಮತ್ತು ಅವಕಾಶಗಳು ಸಿಕ್ಕಿವೆ. ಜೈ ಹಿಂದ್’ ಎಂದು ಗಂಭೀರ್ ‘ಎಕ್ಸ್’ ಪೋಸ್ಟ್‌ನಲ್ಲಿ ಹೇಳಿದ್ದರು. ಹಲವು ಹೊಸ ನಾಯಕರಿಗೆ ಟಿಕೆಟ್ ನೀಡಲು ಚಿಂತನೆ ನಡೆಸಿರುವ ಬಿಜೆಪಿ, ಕೆಲವು ಹಾಲಿ ಸಂಸದರಿಗೆ ಪಕ್ಷದ ಸಂಘಟನೆಯ ಇತರ ಕೆಲಸಗಳತ್ತ ಗಮನ ಹರಿಸಲು ಸೂಚಿಸಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.