ನವದೆಹಲಿ: ಶನಿವಾರ ಸಂಜೆ ನಿಧನರಾದ ಕಾಂಗ್ರೆಸ್ ನಾಯಕಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಅಂತ್ಯ ಸಂಸ್ಕಾರ ಭಾನುವಾರ ನಡೆಯಿತು. ಭಾರೀ ಮಳೆಯ ನಡುವೆಯೂ ಕಾಂಗ್ರೆಸ್ ಕಾರ್ಯಕರ್ತರು, ಶೀಲಾ ಅವರ ಅಭಿಮಾನಿಗಳು ಮತ್ತು ಬಂಧುಗಳು ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು.
ಇಲ್ಲಿನ ನಿಗಮಬೋಧ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶೀಲಾ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು, ಕೇಂದ್ರದ ಗೃಹಸಚಿವ ಅಮಿತ್ ಶಾ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿ ಗೃಹಸಚಿವ ಸತ್ಯೇಂದ್ರ ಜೈನ್ ಮತ್ತಿತರರು ಇದ್ದರು.
ಬಿಜೆಪಿಯ ಹಿರಿಯ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿ ಹಾಗೂ ಸುಷ್ಮಾ ಸ್ವರಾಜ್ ಅವರು ಬೆಳಿಗ್ಗೆ ಶೀಲಾ ಅವರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.
ಅಂತಿಮ ಸಂಸ್ಕಾರಕ್ಕೂ ಮುನ್ನ, ಶೀಲಾ ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಕಾಂಗ್ರೆಸ್ ಮುಖ್ಯ ಕಚೇರಿಗೆ ಒಯ್ಯಲಾಯಿತು. ಅಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಕಮಲ್‌ನಾಥ್ ಮುಂತಾದವರು ಅಂತಿಮ ನಮನ ಸಲ್ಲಿಸಿದರು. ಆ ನಂತರ ಶರೀರವನ್ನು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ (ಡಿಪಿಸಿಸಿ) ಕಚೇರಿಗೆ ಒಯ್ದು ಅಲ್ಲಿಯೂ ಗೌರವ ಅರ್ಪಿಸಲಾಯಿತು.
ಆನಂತರ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ನಿಗಮಬೋಧ ಘಾಟ್‌ಗೆ ಒಯ್ದು ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.