ಬೆಂಗಳೂರು: ಶೀಲಾ ದೀಕ್ಷಿತ್ ಸಜ್ಜನ ರಾಜಕಾರಣಿ. ಈ ಕಾರಣಕ್ಕಾಗಿಯೇ ದೆಹಲಿ ಮತದಾರರು ಅವರನ್ನು ಸತತವಾಗಿ ವಿಧಾನಸಭೆಗೆ ಆರಿಸಿ ಕಳುಹಿಸಿದ್ದರು. ದೆಹಲಿಯ ಎರಡನೇ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದ ಅವರನ್ನು ಜನ ತಮ್ಮ `ಮನೆಯ ಹೆಣ್ಣುಮಗಳು’ಎಂದೇ ಭಾವಿಸಿದ್ದರು.ಪ್ರಬುದ್ಧ ವ್ಯಕ್ತಿತ್ವದ ಮುಖ್ಯಮಂತ್ರಿ ದ್ವೇಷದ ರಾಜಕಾರಣವನ್ನು ಎಂದೂ ಮಾಡಿಲ್ಲ. ಅವರ ಉತ್ತಮ ನಡವಳಿಕೆಯಿಂದಾಗಿ ದೀಕ್ಷಿತ್ ಹೊರಗಿನವರು ಎಂಬ ಕೆಲವರ ಅಪಪ್ರಚಾರಕ್ಕೆ ರಾಜಧಾನಿ ಅದುವರೆಗೆ ಕಿವಿಗೊಟ್ಟಿರಲಿಲ್ಲ.
ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದಹಿರಿಯ ರಾಜಕಾರಣಿ ಶೀಲಾ ದೀಕ್ಷಿತ್ ಶನಿವಾರ ನಿಧನರಾಗಿದ್ದಾರೆ.
ಗಾಂಧಿ ಕುಟುಂಬಕ್ಕೆ ಆತ್ಮೀಯರಾದ ಶೀಲಾ ದೀಕ್ಷಿತ್ ಹುಟ್ಟಿದ್ದು ಮಾರ್ಚ್ 31, 1938ರಲ್ಲಿ. ಪಂಜಾಬಿನ ಕಪುರ್ತಲಾ ಜಿಲ್ಲೆಯ ರಾಜಕೀಯೇತರ ಕುಟುಂಬಕ್ಕೆ ಸೇರಿದ ಅವರು ಕೇಂದ್ರದ ಮಾಜಿ ಸಚಿವ, ಕರ್ನಾಟಕದ ಮಾಜಿ ರಾಜ್ಯಪಾಲರೂ ಆದ ಉಮಾಶಂಕರ್ ದೀಕ್ಷಿತ್ ಅವರ ಪುತ್ರನನ್ನು (ಐಎಎಸ್ ಅಧಿಕಾರಿ) ಕೈಹಿಡಿದರು. ಗಾಂಧಿ ಕುಟುಂಬದ `ರಕ್ಷಾ ಕವಚ` ಇದ್ದುದ್ದರಿಂದ ರಾಜಕೀಯ ಎದುರಾಳಿಗಳು ಇವರ ಹತ್ತಿರಕ್ಕೆ ಸುಳಿಯಲು ಸಾಧ್ಯವಾಗಿರಲಿಲ್ಲ.
ದೆಹಲಿಯ ಜೀಸಸ್ ಮತ್ತು ಮೇರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಶೀಲಾ, ಮಿರಿಂಡಾ ಹೌಸ್‌ನಲ್ಲಿ ಪದವಿ ಪಡೆದರು. ದೆಹಲಿ ವಿವಿಯಲ್ಲಿ ಸ್ನಾತಕೋತ್ತರ ಪದವಿ (ಇತಿಹಾಸ) ಮುಗಿಸಿದರು. ಆನಂತರ ಡಾಕ್ಟರೇಟ್ ಪದವಿ. ಆಡಳಿತ ಮತ್ತು ಶಾಸನಾತ್ಮಕ ವಿಷಯಗಳಲ್ಲಿ ಪರಿಣತಿ ಹೊಂದಿರುವ ಅವರು 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದ ಬಳಿಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡರು. ಆ ಸಂದರ್ಭದಲ್ಲಿ ಇಂದಿರಾಗೆ ನಿಷ್ಠರಾಗಿದ್ದ ಮಾವ ಉಮಾ ಶಂಕರ್ ದೀಕ್ಷಿತ್ ತಮ್ಮ ಮುದ್ದಿನ ಸೊಸೆಯ ನೆರವಿಗೆ ಬಂದಿದ್ದರು.
ಶೀಲಾ ದೀಕ್ಷಿತ್ ಸಾಮರ್ಥ್ಯ ಮತ್ತು ಕೆಲಸವನ್ನು ಮೆಚ್ಚಿಕೊಂಡ ಇಂದಿರಾಗಾಂಧಿ ವಿಶ್ವಸಂಸ್ಥೆ ನಿಯೋಗವೊಂದಕ್ಕೆ ನೇಮಕ ಮಾಡಿದ್ದರು. ಉತ್ತರ ಪ್ರದೇಶದ ಕನೌಜ್ ಲೋಕಸಭಾ ಕ್ಷೇತ್ರವನ್ನು 1984- 89ರವರೆಗೆ ಪ್ರತಿನಿಧಿಸಿದ್ದ ಶೀಲಾ, ರಾಜೀವ ಗಾಂಧಿ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದರು. ಮುಂದೆ ಪ್ರಧಾನಿ ಕಚೇರಿ ಹೊಣೆಯೂ ಹೆಚ್ಚುವರಿಯಾಗಿ ಸಿಕ್ಕಿತು. 1998ರಲ್ಲಿ ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದರು. ಮುಂದಿನ ಆರೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಿತು.
ಪಕ್ಷದೊಳಗಿನ ಗುಂಪುಗಾರಿಕೆಗೆ ಕಡಿವಾಣ ಹಾಕಿದ ಶೀಲಾ `ಈರುಳ್ಳಿ ರಾಜಕಾರಣ`ವನ್ನು (ಈರುಳ್ಳಿ ಬೆಲೆ ಏರಿಕೆ ಬಿಕ್ಕಟ್ಟು) ಸಮರ್ಥವಾಗಿ ಬಳಸಿಕೊಂಡು ಪಕ್ಷದ ಗೆಲುವಿಗೆ ಕಾರಣರಾಗಿದ್ದರು. ಒಟ್ಟು 70 ಕ್ಷೇತ್ರಗಳಲ್ಲಿ ಕಾಂಗ್ರೆಸ್ 52 ಸ್ಥಾನಗಳನ್ನು ಪಡೆದು ಬೀಗಿತ್ತು. ನಂತರದ ಎರಡು ಚುನಾವಣೆಗಳು ಶೀಲಾ ಅವರನ್ನು ಪ್ರಭಾವಿ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಬೆಳೆಯಲು ದಾರಿ ಮಾಡಿಕೊಟ್ಟಿದ್ದವು. ಉತ್ತಮ ಆಡಳಿತ, ಅಭಿವೃದ್ಧಿ ಪರ ಒಲವು ಮುಖ್ಯಮಂತ್ರಿ ಜನಪ್ರಿಯತೆ ಅಲೆಯಲ್ಲಿ ತೇಲುವಂತೆ ಮಾಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.