ನವದೆಹಲಿ: ಮಿಷನ್ ಶಕ್ತಿ ಬಗ್ಗೆ ಯುಪಿಎ ಸರ್ಕಾರ ಒಪ್ಪಿಗೆ ನೀಡಿದ್ದರೆ, 2014-2015ರ ವೇಳೆಯಲ್ಲಿಯೇ ಉಪಗ್ರಹ ನಿಗ್ರಹ ಕ್ಷಿಪಣಿ ಸಾಮರ್ಥ್ಯವನ್ನು ಭಾರತ ಹೊಂದುತ್ತಿತ್ತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಮುಖ್ಯಸ್ಥ ವಿ.ಕೆ ಸಾರಸ್ವತ್ ಹೇಳಿದ್ದಾರೆ.
ಇಸ್ರೊ ಅಧ್ಯಕ್ಷ ಜಿ.ಮಾಧವನ್ ನಾಯರ್ ಅವರ ಮಾತನ್ನು ಬೆಂಬಲಿಸಿದ ಸಾರಸ್ವತ್, ದಶಕದ ಹಿಂದೆಯೇ ಭಾರತ ಉಪಗ್ರಹ ನಿಗ್ರಹ ಕ್ಷಿಪಣಿ ಸಾಮರ್ಥ್ಯ ಸಿದ್ಧಿಸಿತ್ತು. ಆದರೆ ಅದನ್ನು ತೋರ್ಪಡಿಸಲು ಅಂದು ಅಧಿಕಾರದಲ್ಲಿದ್ದ ಸರ್ಕಾರಕ್ಕೆ ಸಂಕಲ್ಪ ಶಕ್ತಿ ಇರಲಿಲ್ಲ ಎಂದಿದ್ದಾರೆ.
ಆಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ರಾಷ್ಟ್ರೀಯ ಭದ್ರತಾ ಸಮಿತಿಯ ಮುಂದೆ ನಾವು ಈ ವಿಷಯವನ್ನು ಪ್ರಸ್ತುತ ಪಡಿಸಿದ್ದೆವು, ಆದರೆ ದುರದೃಷ್ಟವಶಾತ್ ಯುಪಿಎ ಸರ್ಕಾರದಿಂದ ನಮಗೆ ಧನಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಹಾಗಾಗಿ ನಾವು ಮುಂದುವರಿಸಿಲ್ಲ ಎಂದು ಸಾರಸ್ವತ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. ಆ ಕಾಲದಲ್ಲಿ ಶಿವ ಶಂಕರ್ ಮೆನನ್ ಭದ್ರತಾ ಸಲಹೆಗಾರರಾಗಿದ್ದರು,
ಪ್ರಧಾನಿ ಮೋದಿಗೆ ಧೈರ್ಯ ಇದೆ ಹಾಗಾಗಿ ಅವರು ಇದಕ್ಕೆ ಸಮ್ಮತಿ ನೀಡಿದರು ಎಂದಿದ್ದಾರೆಸಾರಸ್ವತ್.
ಡಾ. ಸತೀಶ್ ರೆಡ್ಡಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜತ್ ದೊಬಾಲ್ ಅವರು ಈ ಪ್ರಸ್ತಾಪವನ್ನು ಮೋದಿಯ ಮುಂದಿರಿಸಿದಾಗ ನೀವು ಮುಂದುವರಿಯಿರಿ ಎಂದು ಅವರು ಹೇಳಿದ್ದರು. 2012-13ರಲ್ಲಿಯೇ ಇದಕ್ಕೆ ಅನುಮತಿ ನೀಡಿದ್ದರೆ, 2014-15ರಲ್ಲಿಯೇ ಈ ಕಾರ್ಯ ನಡೆಯುತ್ತಿತ್ತು ಎಂದು ಸಾರಸ್ವತ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.