ತಿರುವನಂತಪುರ: ಮಾಜಿ ಅಥ್ಲೀಟ್ ಪದ್ಮಿನಿ ಥಾಮಸ್ ಮತ್ತು ಜಿಲ್ಲಾ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಥಂಪನೂರ್ ಸತೀಶ್ ಅವರು ಗುರುವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆ. ಸುರೇಂದ್ರನ್ ಅವರು ಕಾಂಗ್ರೆಸ್‌ನ ಹಲವು ಸದ್ಯರು ಕೇಸರಿ ಪಕ್ಷ ಸೇರಲಿದ್ದಾರೆ ಎಂದು ಹೇಳಿದ ಮರುದಿನವೇ ಈ ಬೆಳವಣಿಗೆ ನಡೆದಿದೆ. ವಾರದ ಹಿಂದೆ ಕೇರಳ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಅವರು ವಾರದ ಹಿಂದಷ್ಟೆ ಬಿಜೆಪಿ ಸೇರಿದ್ದರು.
1982ರ ಏಷ್ಯನ್ ಕ್ರೀಡಾಕೂಟದ ಬೆಳ್ಳಿ ಮತ್ತು ಕಂಚು ಪದಕ ವಿಜೇತೆ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತೆ ಥಾಮಸ್, ಕಾಂಗ್ರೆಸ್‌ನಲ್ಲಿ ಭಾವನಾತ್ಮಕ ಮತ್ತು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದು ಬಿಜೆಪಿ ಸೇರಲು ಪ್ರೇರೇಪಿಸಿತು ಎಂದು ಹೇಳಿದ್ದಾರೆ.
‘ನಾನು ಯಾವುದೇ ಸ್ಥಾನ ಬಯಸಿ ಬಿಜೆಪಿಗೆ ಸೇರ್ಪಡೆಯಾಗಿಲ್ಲ. ಮೋದಿ ಅವರ ಸರ್ಕಾರವು ಮಹಿಳೆಯರಿಗೆ ನೀಡಿದ ಆದ್ಯತೆ ಮತ್ತು ಮೀಸಲಾತಿಯಿಂದ ನಾನು ಪ್ರಭಾವಿತಳಾಗಿದ್ದೇನೆ. ಸಂತೋಷದಿಂದ ಪಕ್ಷ ಸೇರಿದ್ದೇನೆ’ ಎಂದು ಬಿಜೆಪಿ ಸೇರಿದ ನಂತರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಕ್ಷದ ದಿಗ್ಗಜ ನಾಯಕ ಕೆ. ಕರುಣಾಕರನ್ ನಿಧನದ ನಂತರ ಕೇರಳದಲ್ಲಿ ಕಾಂಗ್ರೆಸ್ ಪತನ ಆರಂಭವಾಗಿದೆ. ಕಾಂಗ್ರೆಸ್ ತೊರೆದವರಿಂದ ಪಕ್ಷಕ್ಕೆ ಧಕ್ಕೆಯಾಗುವುದಿಲ್ಲ ಎಂಬುದು ಕೆಲ ಕಾಂಗ್ರೆಸ್ ಮುಖಂಡರ ಅಭಿಪ್ರಾಯವಾಗಿದೆ. ಆದರೆ, ಇದು ಆರಂಭವಷ್ಟೇ ಎಂದು ಅವರಿಗೆ ಹೇಳಬಯಸುವೆ. ಶೀಘ್ರದಲ್ಲೇ ರಾಜ್ಯದ 14 ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯತ್ತ ಹರಿದು ಬರಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯು ಉತ್ತಮ ಫಲಿತಾಂಶ ಪಡೆಯಲಿದೆ ಎಂದು ಥಂಪನೂರ್ ಸತೀಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.