ಮುಂಬೈ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ, ಪೆಟ್ರೋಲಿಯಂ ಸಚಿವರೂ ಆಗಿರುವ ಅರ್ಜುನ್ ರಣತುಂಗ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.ಮುಂಬೈಯ ಹೋಟೆಲೊಂದರಲ್ಲಿ ರಣತುಂಗ ತಮಗೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಾಜಿಫ್ಲೈಟ್ ಅಟೆಂಡೆಂಟ್ಆರೋಪಿಸಿದ್ದಾರೆ.
ಫೇಸ್‍ಬುಕ್ ಪೋಸ್ಟ್ ಮೂಲಕ ಈಕೆ ರಣತುಂಗ ವಿರುದ್ಧ ಆರೋಪ ಮಾಡಿದ್ದಾರೆ.
ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ಈ ಘಟನೆ ನಡೆದಿದೆ.ಹೋಟೆಲ್‍ನಲ್ಲಿ ರಣತುಂಗ ನನ್ನ ಸೊಂಟ ಮುಟ್ಟಿದ್ದಾರೆ. ತಕ್ಷಣವೇ ನಾನು ಸಹಾಯಕ್ಕಾಗಿ ಹೋಟೆಲ್ ಸ್ವಾಗತ ಕೊಠಡಿಗೆ ಹೋದಾಗ ಇದು ನಿಮ್ಮ ವೈಯಕ್ತಿಕ ಸಂಗತಿ ಎಂದು ಹೋಟೆಲ್‍ನವರು ಮಧ್ಯಪ್ರವೇಶಿಸಲು ನಿರಾಕರಿಸಿದ್ದರು ಎಂದು ಯುವತಿ ತಮ್ಮ ಫೇಸ್‍ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಫೇಸ್‌ಬುಕ್ ಪೋಸ್ಟ್ ನಲ್ಲಿ ಏನಿದೆ?
ಹೋಟೆಲ್ ಜುಹು ಸೆಂಟರ್‌ನ ಎಲಿವೇಟರ್ ನಲ್ಲಿ ಕ್ರಿಕೆಟ್ ಅಭಿಮಾನಿಯಾದ ನನ್ನ ಸಹೋದ್ಯೋಗಿ ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡದ ಸದಸ್ಯರನ್ನು ನೋಡಿದ್ದರು, ಅವರ ಕೋಣೆಗೆ ಹೋಗಿ ಆಟೋಗ್ರಾಫ್ ತೆಗೆದುಕೊಳ್ಳೋಣ ಎಂದು ಆಕೆ ನನ್ನಲ್ಲಿ ಹೇಳಿದ್ದಳು. ಅವಳ ಜತೆಯಲ್ಲಿ ನಾನೂ ಹೋದೆ. ಹೋಟೆಲ್ ಕೋಣೆಯೊಳಗೆ ಹೋದಾಗ ನಮಗೆ ಮದ್ಯ ನೀಡಿದರು. ನಾನು ಬೇಡ ಎಂದು ಹೇಳಿದೆ. ನನಗೆ ಭಯವಾಗುತ್ತಿತ್ತು. ಕೈಯಲ್ಲಿದ್ದ ನೀರಿನ ಬಾಟಲಿ ಹಿಡಿದುಕೊಂಡು ಮುಂದೇನು ಮಾಡಬೇಕೆಂದು ತಿಳಿಯದಾದೆ.ಅವರು ಏಳು ಮಂದಿ ಇದ್ದರು. ನಾವಿಬ್ಬರೇ. ಕೋಣೆಗೆ ಚಿಲಕ ಹಾಕಲಾಗಿತ್ತು. ನಾನು ಬೆವರತೊಡಗಿದೆ. ನಾವು ಆದಷ್ಟು ಬೇಗ ಇಲ್ಲಿಂದ ಹೊರಗೆ ಹೋಗೋಣ ಎಂದು ನಾನು ಅವಳಿಗೆ ಹೇಳಿದೆ.
ಆದರೆ ಕ್ರಿಕೆಟ್ ಅಭಿಮಾನಿಯಾಗಿದ್ದ ಆಕೆ ಕ್ರಿಕೆಟ್ ಆಟಗಾರರನ್ನು ನೋಡಿ ಅಚ್ಚರಿಗೊಂಡು ನಿಂತಿದ್ದಳು. ಅಲ್ಲಿದ್ದ ಈಜುಕೊಳದ ಬದಿಯಲ್ಲಿ ನಡೆಯುವ ಇಚ್ಛೆ ಅವಳಲ್ಲಿತ್ತು.ಸಂಜೆ ಏಳು ಗಂಟೆಯಾಗಿತ್ತು. ಹೋಟೆಲ್ ಹಿಂಭಾಗದಲ್ಲಿ ಮಂದ ಬೆಳಕಿನಲ್ಲಿದ್ದ ಕಿರು ದಾರಿಯಾಗಿತ್ತು ಅದು. ನಾನು ಹಿಂತಿರುಗಿ ನೋಡಿದಾಗ ಅವಳು ನನ್ನೊಂದಿಗೆ ಇರಲಿಲ್ಲ.ಭಾರತೀಯ ಕ್ರಿಕೆಟಿಗರು ಕಣ್ಣಿಗೆ ಕಾಣಿಸದಷ್ಟು ದೂರದಲ್ಲಿದ್ದರು.
ಅಷ್ಟೊತ್ತಿಗೆ ರಣತುಂಗ ನನ್ನ ಸೊಂಟ ಬಳಸಿ ಹಿಡಿದುಕೊಂಡರು.ಅವರು ನನ್ನ ಎದೆಭಾಗ ಮುಟ್ಟಲು ಮುಂದಾದಾಗ ಭಯಭೀತಳಾದ ನಾನು ಜೋರಾಗಿ ಕಿರುಚಿದೆ.ಅವರ ಕಾಲು ತುಳಿದು ನೋವು ಮಾಡಿದೆ.ಇದರ ಪರಿಣಾಮ ತೀವ್ರವಾಗಿರುತ್ತದೆ.ನಿಮ್ಮ ಪಾಸ್ ಪೋರ್ಟ್ ರದ್ದು ಮಾಡುತ್ತೇನೆ ಎಂದು ನಾನು ಅವರಿಗೆ ಬೆದರಿಕೆಯೊಡ್ಡಿದೆ.ಒಬ್ಬ ಶ್ರೀಲಂಕಾ ಪ್ರಜೆ ಭಾರತೀಯರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ನಾನು ಪೊಲೀಸರಿಗೆ ದೂರು ನೀಡುತ್ತೇನೆ ಎಂದೆ. ಹೇಗೋ ಆತನನನ್ನು ದೂರ ತಳ್ಳಿ ಅಲ್ಲಿಂದ ನೇರ ಹೋಟೆಲ್ ಸ್ವಾಗತ ಕೊಠಡಿಯತ್ತ ಓಡಿದೆ. ಆದರೆ ಇದು ನಿಮ್ಮ ವೈಯಕ್ತಿಕ ಸಂಗತಿ ಅಲ್ಲವೇ? ಎಂದು ಸ್ವಾಗತ ಕೊಠಡಿಯಲ್ಲಿದ್ದ ವ್ಯಕ್ತಿ ಹೇಳಿದರು.ಅವರು ನನಗೆ ಸಹಾಯ ಮಾಡಲಿಲ್ಲ.
1996 ವಿಶ್ವಕಪ್ ಗೆದ್ದ ಶ್ರೀಲಂಕಾ ನಾಯಕ ರಣತುಂಗ,93 ಟೆಸ್ಟ್ ಪಂದ್ಯಗಳಲ್ಲಿ 5105 ರನ್ ಮತ್ತು 269 ಏಕದಿನ ಪಂದ್ಯಗಳಲ್ಲಿ 7456 ರನ್ ಗಳಿಸಿದ್ದಾರೆ.ಶ್ರೀಲಂಕಾ ಫ್ರೀಡಂ ಪಾರ್ಟಿ ಮೂಲಕ ರಾಜಕೀಯ ಪ್ರವೇಶಿಸಿದ ರಣತುಂಗ ಆನಂತರ ಡೆಮಾಕ್ರಟಿಕ್ ನ್ಯಾಷನಲ್ ಅಲಯನ್ಸ್ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.