ADVERTISEMENT

ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸೆಂಥಿಲ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 6:49 IST
Last Updated 8 ನವೆಂಬರ್ 2020, 6:49 IST
ಸಸಿಕಾಂತ್ ಸೆಂಥಿಲ್
ಸಸಿಕಾಂತ್ ಸೆಂಥಿಲ್   

ಚೆನ್ನೈ: ಕರ್ನಾಟಕ ಕೇಡರ್‌ನ ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಸೋಮವಾರ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. 2017ರ ಅಕ್ಟೋಬರ್ 10ರಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಅವರು 2019ರ ಸೆಪ್ಟೆಂಬರ್‌ 6ರಂದು ರಾಜೀನಾಮೆ ನೀಡಿದ್ದರು.

ನಾನು ರಾಜಕೀಯ ಸೇರಲು ನಿರ್ಧರಿಸಿದ್ದೇನೆ. ಕಾಂಗ್ರೆಸ್ ಪಕ್ಷ ಸೇರಲಿದ್ದೇನೆ ಎಂದು ಸೆಂಥಿಲ್ ಅವರು ‘ಡೆಕ್ಕನ್ ಹೆರಾಲ್ಡ್‌’ಗೆ ತಿಳಿಸಿದ್ದಾರೆ.

ಸೆಂಥಿಲ್ ಅವರು ಸೋಮವಾರ ತಮಿಳುನಾಡು ಕಾಂಗ್ರೆಸ್ ಸಮಿತಿ(ಟಿಎನ್‌ಸಿಸಿ) ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಐಸಿಸಿಯ ತಮಿಳುನಾಡು ಉಸ್ತುವಾರಿ ದಿನೇಶ್ ಗುಂಡೂರಾವ್ ಅವರು ಸೆಂಥಿಲ್ ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ADVERTISEMENT

ಕಾಂಗ್ರೆಸ್ ಸೇರುವ ಹಾಗೂ ಯಾಕಾಗಿ ಆ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದು ಎಂಬ ಬಗ್ಗೆ ಸೆಂಥಿಲ್ ಅವರು ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ.

ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ಬಿಜೆಪಿಗೆ ಸೇರಿದ ಕೆಲವೇ ತಿಂಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಐಎಎಸ್‌ಗೆ ರಾಜೀನಾಮೆ ನೀಡಿದ್ದ ಬಳಿಕ ಸೆಂಥಿಲ್ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೇಶದ ಹಲವೆಡೆ ಅಭಿಯಾನವನ್ನೂ ನಡೆಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದ ವೇಳೆ ಬರೆದಿದ್ದ ಪತ್ರದಲ್ಲಿ ಅವರು, ಪ್ರಜಾಪ್ರಭುತ್ವದ ಮೂಲ ಆಧಾರ ಸ್ತಂಭಗಳು ಹಿಂದೆಂದೂ ಕಾಣದ ರೀತಿಯಲ್ಲಿ ರಾಜಿ ಮಾಡಿಕೊಳ್ಳುತ್ತಿವೆ. ದೇಶದ ಬಹುತ್ವದ ಎಳೆಗಳಿಗೆ ಭವಿಷ್ಯದಲ್ಲಿ ಹೆಚ್ಚು ಅಪಾಯ ಇದ್ದಂತೆ ಭಾಸವಾಗುತ್ತಿದೆ. ಭವಿಷ್ಯದ ದಿನಗಳಲ್ಲಿ ಅಧಿಕಾರಿಗಳಿಗೆ ದೊಡ್ಡ ಪ್ರಮಾಣದ ಸವಾಲುಗಳು ಎದುರಾಗಬಹುದು. ಈ ಹಂತದಲ್ಲಿ ಭಾರತೀಯ ಆಡಳಿತ ಸೇವೆಯಿಂದ (ಐಎಎಸ್‌) ಹೊರಗಿರುವುದೇ ಲೇಸು ಎನಿಸುತ್ತದೆ. ಸೇವೆಯಿಂದ ಹೊರಗಿದ್ದು ಎಲ್ಲ ಜನರ ಒಳಿತಿಗಾಗಿ ದುಡಿಯುತ್ತೇನೆ’ ಎಂದು ಉಲ್ಲೇಖಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.