ಶಿವಸೇನಾದ ಹಿರಿಯ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ಇಂದು(ಶುಕ್ರವಾರ) ಮುಂಜಾನೆ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮನೋಹರ್ ಜೋಶಿ ಅವರು ರಾಯಗಡ ಜಿಲ್ಲೆಯ ನಂದಾವಿ ಗ್ರಾಮದಲ್ಲಿ 1937ರ ಡಿಸೆಂಬರ್ 2 ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ಎಂಎ ಮತ್ತು ಎಲ್ಎಲ್ಬಿ ಪದವಿ ಪಡೆದರು. ಜೋಶಿ ಅವರ ಪತ್ನಿ ಅನಘಾ ಜೋಶಿ 2020ರಲ್ಲಿ ಮೃತಪಟ್ಟಿದ್ದರು. ಓರ್ವ ಪುತ್ರ ಉನ್ಮೇಶ್, ಪುತ್ರಿಯರಾದ ಅಸ್ಮಿತಾ ಹಾಗೂ ನಮ್ರತಾ ಇದ್ದಾರೆ.
ಜೋಶಿ ಅವರು 1995ರಿಂದ 1999ರವರಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ಸಿಎಂ ಆಗಿ ಕಾರ್ಯ ನಿರ್ವಹಿಸಿದ ಅವಿಭಜಿತ ಶಿವಸೇನಾದ ಮೊದಲ ನಾಯಕ ಎಂಬ ಖ್ಯಾತಿ ಅವರಿಗೆ ಸಲ್ಲುತ್ತದೆ. ಜೊತೆಗೆ ರಾಜ್ಯದ ಮೊದಲ ಕಾಂಗ್ರೆಸೇತರ ಸಿಎಂ ಕೂಡ ಹೌದು. ಆ ಬಳಿಕ ಸಂಸತ್ ಚುನಾವಣೆಯಲ್ಲಿ ಗೆದ್ದು 2002ರಿಂದ 2004ರವರೆಗೆ ಲೋಕಸಭಾ ಸ್ಪೀಕರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಯಶಸ್ವಿ ರಾಜಕಾರಣಿ ಹಾಗೂ ಉದ್ಯಮಿಯಾದ ಮನೋಹರ್ ಜೋಶಿ ಕ್ರಿಕೆಟ್ ಪ್ರೇಮಿ ಕೂಡ ಹೌದು.
1967ರಲ್ಲಿ ರಾಜಕೀಯ ಪ್ರವೇಶ ಮಾಡಿದರು.
ಬಳಿಕ ಸುಮಾರು 40 ವರ್ಷಗಳ ಕಾಲ ಶಿವಸೇನಾದಲ್ಲಿ ಗುರುತಿಸಿಕೊಂಡಿದ್ದರು.
1968ರಿಂದ 70ರವರೆಗೆ ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಶನ್‌ನಲ್ಲಿ (BMC) ಕೌನ್ಸಿಲರ್ ಆಗಿ ಹಾಗೂ 1970ರಲ್ಲಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
1976ರಿಂದ 1977ರವರೆಗೆ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು.
1972ರಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ಆಯ್ಕೆಯಾದರು.
ಅಲ್ಲಿ 3 ಅವಧಿಗೆ ಕಾರ್ಯ ನಿರ್ವಹಿಸಿದ ನಂತರ 1990ರಲ್ಲಿ ಮಹಾರಾಷ್ಟ್ರ ವಿಧಾನ ಸಭೆಗೆ ಆಯ್ಕೆಯಾದರು.
ಈ ಅವಧಿಯಲ್ಲಿ ಅವರು ವಿಪಕ್ಷ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದರು.
1995-1999 ರವರೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿ ಹಾಗೂ 2002-2004ರವರೆಗೆ ಲೋಕಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.