ಮುಂಬೈ: ಶಿವಸೇನಾದ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ (86) ಅವರು ಮುಂಬೈನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಬುಧವಾರ ಪಿ.ಡಿ.ಹಿಂದುಜಾ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಜೋಶಿ ಅವರಿಗೆ ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಪತ್ನಿ, ಅನಘಾ ಜೋಶಿ 2020 ರಲ್ಲಿ ನಿಧನರಾಗಿದ್ದರು.
1995 ರಿಂದ 1999ರ ವರೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಅವರು ಸಿ.ಎಂ ಹುದ್ದೆಗೇರಿದ ‘ಅವಿಭಜಿತ’ ಶಿವಸೇನಾದ ಮೊದಲ ನಾಯಕರೂ ಹೌದು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ 2002 ರಿಂದ 2004ರ ವರೆಗೆ ಲೋಕಸಭೆಯ ಸ್ಪೀಕರ್ ಆಗಿದ್ದರು. ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಮೇಲೆ ಅಚಲ ನಿಷ್ಠೆ ಹೊಂದಿದ್ದರು.
1937ರ ಡಿಸೆಂಬರ್ 2 ರಂದು ಜನಿಸಿದ್ದ ಅವರು ಮುಂಬೈನ ಪ್ರತಿಷ್ಠಿತ ವೀರಮಾತಾ ಜೀಜಾಬಾಯಿ ತಾಂತ್ರಿಕ ಸಂಸ್ಥೆಯಲ್ಲಿ (ವಿಜೆಟಿಐ) ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು.
ಅರ್‌ಎಸ್‌ಎಸ್ ಜತೆಗಿನ ನಂಟಿನಿಂದ ರಾಜಕೀಯ ಪ್ರವೇಶಿಸಿದರೂ, ಆ ಬಳಿಕ ಶಿವಸೇನಾ ಸೇರಿದರು. 1967 ರಲ್ಲಿ ಮುಂಬೈನಲ್ಲಿ ಕೌನ್ಸಿಲರ್ ಆಗಿ ರಾಜಕೀಯ ಜೀವನ ಆರಂಭಿಸಿದ್ದಲ್ಲದೆ, 1976–77ರ ಅವಧಿಯಲ್ಲಿ ಮುಂಬೈನ ಮೇಯರ್ ಆಗಿದ್ದರು.
ಶಿವಸೇನಾದ ಹಲವು ‘ಪ್ರಥಮ’ಗಳಿಗೆ ಅವರು ಒಡೆಯರಾಗಿದ್ದರು. ಶಿವಸೇನಾದ ಮೊದಲ ಎಂಎಲ್‌ಸಿ, ಮೊದಲ ವಿರೋಧ ಪಕ್ಷದ ನಾಯಕ, ಮೊದಲ ಮುಖ್ಯಮಂತ್ರಿ ಹಾಗೂ ಮೊದಲ ಸ್ಪೀಕರ್ ಎಂಬ ಗೌರವ ಅವರಿಗೆ ಒಲಿದಿದೆ. ಮೂರು ಅವಧಿಗಳಿಗೆ ಎಂಎಲ್‌ಸಿ ಆಗಿದ್ದ ಜೋಶಿ, 1990 ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದರು. 1990–91 ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.
1999ರ ಲೋಕಸಭೆ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಅಯ್ಕೆಯಾಗಿದ್ದ ಅವರು ಕೇಂದ್ರದ ಬೃಹತ್ ಕೈಗಾರಿಕೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.