ಮುಂಬೈ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿ ಆರ್ಥರ್ ರೋಡ್ ಜೈಲಿನಲ್ಲಿ ಸದ್ಯ ನ್ಯಾಯಾಂಗ ವಶದಲ್ಲಿದ್ದಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಬುಧವಾರ ಬಿಡುಗಡೆಯಾಗಿದ್ದಾರೆ.
ಎನ್‌ಸಿಪಿ ನಾಯಕ, 73 ವರ್ಷದ ದೇಶ್‌ಮುಖ್ ಅವರಿಗೆ ಬಾಂಬೆ ಹೈಕೋರ್ಟ್ ರಜಾ ಕಾಲದ ಪೀಠವು ಡಿ.12ರಂದು ಜಾಮೀನು ಮಂಜೂರು ಮಾಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಸಿಬಿಐ ಸಮಯಾವಕಾಶ ಕೇಳಿತ್ತು. ಹಾಗಾಗಿ, ಹತ್ತು ದಿನಗಳ ಕಾಲಾವಕಾಶ ಕಲ್ಪಿಸಿ, ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಎಸ್. ಕಾರ್ಣಿಕ್ ಅವರು ಡಿ.27 ರವರೆಗೆ ಆದೇಶಕ್ಕೆ ತಡೆ ನೀಡಿದ್ದರು.
ಕಾಲಾವಕಾಶ ಮುಗಿದ ಕಾರಣ, ಇನ್ನಷ್ಟು ದಿನಗಳಿಗೆ ತಡೆ ವಿಸ್ತರಿಸುವಂತೆ ಸಿಬಿಐ ಮಂಗಳವಾರ ಮತ್ತೊಮ್ಮೆ ಮಾಡಿದ ಮನವಿಯನ್ನು ಪೀಠ ತಳ್ಳಿ ಹಾಕಿತು.
ಜಾಮೀನು ಆದೇಶಕ್ಕೆ ತಡೆ ವಿಸ್ತರಿಸಲು ಪೀಠ ನಿರಾಕರಿಸಿರುವುದರಿಂದ ದೇಶ್‌ಮುಖ್ ಅವರನ್ನು ಬುಧವಾರ ಬಿಡುಗಡೆ ಮಾಡಬಹುದು ಎಂದು ಅವರ ವಕೀಲರು ತಿಳಿಸಿದ್ದಾರೆ. ಇ.ಡಿ ಪ್ರಕರಣದಲ್ಲಿ ದೇಶ್‌ಮುಖ್ ಅವರಿಗೆ ಹೈಕೋರ್ಟ್ ಅಕ್ಟೋಬರ್‌ನಲ್ಲಿ ಜಾಮೀನು ನೀಡಿದೆ.
ತನಿಖಾ ಸಂಸ್ಥೆಯು ಸದ್ಯ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಆದರೆ, ರಜೆ ಇರುವ ಕಾರಣಕ್ಕೆ ಈ ಮೇಲ್ಮನವಿ ಅರ್ಜಿ 2023ರ ಜನವರಿಯಲ್ಲಿ ವಿಚಾರಣೆಗೆ ಬರಲಿದೆ.
ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಮಾಡಿರುವ ₹100 ಕೋಟಿ ಲಂಚದ ಆರೋಪದ ತನಿಖೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ಅವರನ್ನು 2021ರ ನವೆಂಬರ್ 2ರಂದು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.