ನವದೆಹಲಿ: ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ (ಸೋಷಿಯಲ್ ಮೀಡಿಯಾ) ನಿರ್ವಹಣಾ ವಿಭಾಗದ ಮುಖ್ಯಸ್ಥೆಯಾಗಿದ್ದ ನಟಿ, ಮಂಡ್ಯದ ಮಾಜಿ ಸಂಸದೆ ರಮ್ಯಾ, ಆ ಸ್ಥಾನ ತೊರೆದು ಎರಡು ವರ್ಷಗಳೇ ಕಳೆದಿವೆ.
ಆದರೆ, ಪಕ್ಷದಲ್ಲಿ ಸಕ್ರಿಯರಾಗಿದ್ದ ಅವರು ಇದ್ದಕ್ಕಿದ್ದಂತೆಯೇ ಹೊರನಡೆದಿದ್ದು ಏಕೆ ಎಂಬುದು ಇದುವರೆಗೆ ರಹಸ್ಯವಾಗಿಯೇ ಉಳಿದಿತ್ತು. ಇದೀಗ ಸ್ವತಃ ರಮ್ಯಾ ಅವರೇ ತಮ್ಮ ರಾಜೀನಾಮೆಗೆ ಕಾರಣ ಏನು ಎಂಬುದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ನನ್ನ ಒಂದು ಸಣ್ಣ ತಪ್ಪಿನಿಂದ ರಾಹುಲ್ ಗಾಂಧಿ ಅವರು ಪರಿತಪಿಸುವಂತಾಗಿತ್ತು. ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವಂತಾಗಿತ್ತು. ಆ ಘಟನೆ ನನಗೆ ಮುಜುಗರ ಉಂಟು ಮಾಡಿದ್ದಲ್ಲದೆ, ಅನೇಕರ ಕೆಂಗಣ್ಣಿಗೆ ಗುರಿ ಆಗುವಂತೆ ಮಾಡಿತು’ ಎಂದು ಅವರು ನೆನಪಿಸಿಕೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ 2018ರಲ್ಲಿ ಮಾಜಿ ಸಂಸದರೊಂದಿಗೆ ಜರ್ಮನಿಗೆ ಭೇಟಿ ನೀಡಿದ್ದರು. ಬರ್ಲಿನ್‌ನಲ್ಲಿರುವ ವಸ್ತು ಸಂಗ್ರಹಾಲಯವೊಂದರ ವೀಕ್ಷಣೆಗೆ ತೆರಳಿದಾಗಿನ ಕೆಲವು ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದ ನಾನು, ಭಾರತದಲ್ಲಿನ ನಮ್ಮ ತಂಡಕ್ಕೆ ಕಳುಹಿಸಿಕೊಟ್ಟಿದ್ದೆ. ಬೇಡವಾದ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ರಾಹುಲ್ ಅವರ ಛಾಯಾಚಿತ್ರಗಳು ಸಾಕಷ್ಟು ಟೀಕೆಗೂ ಕಾರಣವಾದವು’ ಎಂದು ರಮ್ಯಾ ಹೇಳಿಕೊಂಡಿದ್ದಾರೆ.
‘ರಾಹುಲ್ ಅಪಹಾಸ್ಯಕ್ಕೆ ಗುರಿಯಾಗಿದ್ದರು. ನಾನು ಮಾಡಿದ ತಪ್ಪಿಗೆ ಅವರನ್ನು ಕೆಟ್ಟದಾಗಿ ಬಿಂಬಿಸಲಾಯಿತು. ಈ ಘಟನೆಯಿಂದ ವಿಚಲಿತಳಾದ ನಾನು ಅವರ ಬಳಿ ತೆರಳಿ ಕ್ಷಮೆ ಕೋರಿದೆ. ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದೆ. ಆದರೆ, ರಾಜೀನಾಮೆ ಸ್ವೀಕರಿಸದ ರಾಹುಲ್, ಮಂದಿನ ಬಾರಿ ಎಚ್ಚರಿಕೆ ವಹಿಸಿ, ಜಾಗರೂಕರಾಗಿರಿ ಎಂದಷ್ಟೇ ಹೇಳಿ ರಾಜೀನಾಮೆ ಪಡೆಯಲು ನಿರಾಕರಿಸಿದರು. ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು’ ಎಂದು ಎರಡು ವರ್ಷಗಳ ನಂತರ ರಮ್ಯಾ ವಿವರಣೆ ನೀಡಿದ್ದಾರೆ.
‘ಅವರನ್ನು ಹಾಸ್ಯಕ್ಕೆ ಗುರಿಯಾಗಿಸಿದ್ದ ನನ್ನನ್ನು ಅಂದೇ ವಜಾ ಮಾಡಬೇಕಾಗಿತ್ತು. ಆದರೆ, ರಾಹುಲ್ ತುಂಬ ಒಳ್ಳೆಯ ವ್ಯಕ್ತಿ. ಅವರನ್ನು ಇತರರೊಡನೆ ಹೋಲಿಸಲಾಗದು’ ಎಂದೂ ರಮ್ಯಾ ವರ್ಣಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.