ಶ್ರೀನಗರ: ಲೋಕಸಭೆ ಚುನಾವಣೆಯ ಬಳಿಕ ಮತ್ತೊಂದು ಹಂತದ ರಾಜಕೀಯ ಸಮೀಕರಣಕ್ಕೆ ಜಮ್ಮು ಮತ್ತು ಕಾಶ್ಮೀರ ಸಾಕ್ಷಿಯಾಗುತ್ತಿದೆ. ವಿಧಾನಸಭೆ ಚುನಾವಣೆ ಘೋಷಣೆಯಾದ ಮೂರು ದಿನಗಳ ಬೆನ್ನಲ್ಲೇ ಇಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದೆ.
ತಾನು ಯಾವ ರಾಜಕೀಯ ಪಕ್ಷಗಳೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ಹೇಳಿದೆ. ಇನ್ನೊಂದೆಡೆ ಕಾಂಗ್ರೆಸ್ ಮೈತ್ರಿಯ ಕುರಿತು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಈ ಎರಡು ರಾಷ್ಟ್ರೀಯ ಪಕ್ಷಗಳು ಲೋಕಸಭಾ ಚುನಾವಣೆಯ ವೇಳೆ ಇಲ್ಲಿನ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದವು.
ಗುಲಾಮ್ ನಬಿ ಆಜಾದ್ ಅವರ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಹಾಗೂ ಅಲ್ತಾಫ್ ಬುಖಾರಿ ಅವರ ಅಪ್ನಿ ಪಾರ್ಟಿಯ (ಎಪಿ) ಹಲವು ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಈ ಪಕ್ಷಗಳ ಕಳಪೆ ಪ್ರದರ್ಶನದ ಕಾರಣಕ್ಕಾಗಿ ಪಕ್ಷ ತೊರೆಯುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ಸೇರಿದಂತೆ ಇತರ ಪಕ್ಷಗಳಿಂದ ಫಾರುಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷಕ್ಕೆ ಹಲವು ನಾಯಕರು ಸೇರುತ್ತಿದ್ದಾರೆ.
ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಜಾವಿದ್ ಮಿರ್ಚಲ್ ಅವರು ತಮ್ಮ ಹಲವು ಬೆಂಬಲಿಗರೊಂದಿಗೆ ಎನ್‌ಸಿ ಪಕ್ಷವನ್ನು ಸೇರಿಕೊಂಡಿದ್ದಾರೆ. ಅಪ್ನಿ ಪಕ್ಷದ ಯುವ ಘಟಕದ ಸಂಯೋಜಕ ಅಜಯ್ ಕುಮಾರ್ ಸದೋತ್ರ, ಬಿಜೆಪಿಯ ಒಬಿಸಿ ಘಟಕದ ಕಾರ್ಯದರ್ಶಿ ಹಾಗೂ ಭಾರತೀಯ ಮೋದಿ ಸೇನೆಯ ಅಧ್ಯಕ್ಷ ಸುಖ್‌ಜಿತ್ ಸಿಂಗ್ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಎನ್‌ಸಿಗೆ ಪಕ್ಷಾಂತರಗೊಂಡಿದ್ದಾರೆ.
ಅಪ್ನಿ ಪಾರ್ಟಿಯ ಉಪಾಧ್ಯಕ್ಷ, ಹಿರಿಯ ರಾಜಕಾರಣಿ ಚೌಧರಿ ಜುಲ್ಫಿಕರ್ ಅಲಿ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು.
ತಾಜ್ ಮೊಹಿಯುದ್ದೀನ್ ಅವರು ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ತೊರೆದಿದ್ದು, ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ಮುನ್ನವೇ ಗುಲಾಮ್ ನಬಿ ಆಜಾದ್ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲಿದ್ದಾರೆ ಎನ್ನುವ ಚರ್ಚೆಯೂ ನಡೆಯುತ್ತಿದೆ.
ಒಮರ್ ಅಬ್ದುಲ್ಲಾ ಅವರ ಎನ್‌ಸಿ ಪಕ್ಷವು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆ ಕಳೆದುಕೊಳ್ಳುತ್ತಿದೆ. ಅದಕ್ಕಾಗಿಯೇ ಅವರು ವಿಶೇಷ ಸ್ಥಾನಮಾನ ರದ್ದತಿಯ ಕುರಿತು ಮಾತನಾಡುತ್ತಿದ್ದಾರೆ.– ರವಿಂದರ್ ರೈನ, ಅಧ್ಯಕ್ಷ ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕ
‘ಅತಿ ಆತ್ಮವಿಶ್ವಾಸದ ಕುರಿತು ಬಿಜೆಪಿ ಮಾತನಾಡುವುದು ಬೇಡ’
‘ಅತಿ ಆತ್ಮವಿಶ್ವಾಸದ ಕುರಿತು ಬಿಜೆಪಿ ಮಾತನಾಡುವುದು ಹಾಸ್ಯಾಸ್ಪದ ಎನ್ನಿಸುತ್ತದೆ. ಅತಿ ಆತ್ಮವಿಶ್ವಾಸಕ್ಕೆ ಹೊಸ ಭಾಷ್ಯ ಬರೆದಿದ್ದು ಬಿಜೆಪಿ. ಲೋಕಸಭೆ ಚುನಾವಣೆಯಲ್ಲಿ ಚಾರ್‌ಸೌ ಪಾರ್ (400ಕ್ಕೂ ಹೆಚ್ಚು ಸ್ಥಾನಗಳು) ಎಂದವರು ಯಾರು? ಆಮೇಲೆ 370 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಪ್ರಚಾರ ಮಾಡಿದರು. ಆದರೆ ಗೆದ್ದಿದ್ದು 240. ಆದ್ದರಿಂದ ಬಿಜೆಪಿಯು ಅತಿ ಆತ್ಮವಿಶ್ವಾಸದ ಕುರಿತು ಮಾತನಾಡದಿರುವುದೇ ಒಳ್ಳೆಯದು’ ಎಂದು ಒಮರ್ ಅಬ್ದುಲ್ಲಾ ಅವರು ಲೇವಡಿ ಮಾಡಿದರು.
‘ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುತ್ತೇವೆ’ ಎಂದು ಎನ್‌ಸಿ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಖಾಸಗಿ ಸುದ್ದಿ ವಾಹನಿಯೊಂದಕ್ಕೆ ಶನಿವಾರ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯು ‘ಒಮರ್ ಅಬ್ದುಲ್ಲಾ ಅವರು ‘ಅತಿ ಆತ್ಮವಿಶ್ವಾಸ’ ತೋರಿಸುತ್ತಿದ್ದಾರೆ’ ಎಂದಿತ್ತು. ಬಿಜೆಪಿಯ ಈ ಹೇಳಿಕೆಗೆ ಒಮರ್ ಭಾನುವಾರ ಪ್ರತಿಕ್ರಿಯಿಸಿದರು.
‘ಸೆಪ್ಟೆಂಬರ್ 18ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಆಗಸ್ಟ್ 20ರಂದು ಬಿಡುಗಡೆ ಮಾಡಲಿದ್ದೇವೆ’ ಎಂದು ಒಮರ್ ಮಾಹಿತಿ ನೀಡಿದರು.
ಮೈತ್ರಿ ಕುರಿತು ಹೈಕಮಾಂಡ್ ನಿರ್ಧರಿಸಲಿದೆ: ಕಾಂಗ್ರೆಸ್
ಇಲ್ಲಿನ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೇ ಬೇಡವೇ ಎನ್ನುವುದರ ಕುರಿತು ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಲೋಕಸಭೆಯಲ್ಲಿ ಪಕ್ಷವು ಮೈತ್ರಿ ಮಾಡಿಕೊಂಡಿತ್ತು. ಕಾಶ್ಮೀರದ ಮೂರು ಕ್ಷೇತ್ರಗಳ ಪೈಕಿ ನಮ್ಮ ಮೈತ್ರಿಯು ಎರಡು ಸ್ಥಾನಗಳನ್ನು ಗೆದ್ದುಕೊಂಡಿತ್ತು’ ಎಂದು ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಅವರು ಭಾನುವಾರ ತಿಳಿಸಿದರು.
ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಮುಖ್ಯಸ್ಥ ಗುಲಾಮ್ ನಬಿ ಆಜಾದ್ ಅವರು ಮರಳಿ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ವದಂತಿಯ ಕುರಿತು ಪ್ರತಿಕ್ರಿಯಿಸಿದ ಅವರು ‘ಅವರಾಗಿಯೇ ಪಕ್ಷ ತೊರೆದಿದ್ದರು. ಈಗ ಮತ್ತೊಮ್ಮೆ ಅವರು ಪಕ್ಷಕ್ಕೆ ಮರಳುತ್ತಾರೆ ಎಂದರೆ ಅವರನ್ನು ಪಕ್ಷವು ತುಂಬು ಹೃದಯದಿಂದ ಸ್ವಾಗತಿಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.