ಜೈಪುರ: ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಬುಧವಾರ ಪಾಲ್ಗೊಂಡು, ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸೆಪ್ಟೆಂಬರ್ 7ರಂದು ಆರಂಭವಾದ ಭಾರತ್ ಜೋಡೊ ಯಾತ್ರೆ ಪ್ರಸ್ತುತ ರಾಜಸ್ಥಾನದಲ್ಲಿ ಸಾಗುತ್ತಿದ್ದು, ಶುಕ್ರವಾರ 100 ದಿನಗಳನ್ನು ಪೂರೈಸಲಿದೆ.
ಸವಾಯಿ ಮಧೋಪುರ್ ಜಿಲ್ಲೆಯ ಭಡೋತಿ ಗ್ರಾಮದಿಂದ ಯಾತ್ರೆಯು ಬುಧವಾರ ಆರಂಭವಾಯಿತು. ಈ ವೇಳೆ ರಾಜನ್ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.
‘ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ದ್ವೇಷಕಾರುವವರ ವಿರುದ್ಧ ದೇಶದಲ್ಲಿ ಒಗ್ಗೂಡುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದ್ದು, ಇದು ಯಶಸ್ವಿಯಾಗಲಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಡಾ. ರಘುರಾಮ್ ರಾಜನ್ ಅವರು ಆರ್‌ಬಿಐನ 23ನೇ ಗವರ್ನರ್ ಆಗಿ 2013ರ ಸೆಪ್ಟೆಂಬರ್‌ನಿಂದ 2016ರ ಸೆಪ್ಟೆಂಬರ್‌ವರೆಗೂ ಕಾರ್ಯ ನಿರ್ವಹಿಸಿದ್ದರು. 2003ರಿಂದ 2006ರವರೆಗೆ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಆರ್ಥಶಾಸ್ತ್ರಜ್ಞ ಮತ್ತು ಸಂಶೋಧನಾ ನಿರ್ದೇಶಕರಾಗಿದ್ದರು.
ಸಂಗೀತ ಕಛೇರಿ: ಜೋಡೊ ಯಾತ್ರೆಯ100 ದಿನದ ಪ್ರಯುಕ್ತ ಶುಕ್ರವಾರ ಜೈಪುರದಲ್ಲಿ ಸಂಗೀತ ಕಛೇರಿಯನ್ನು ಕಾಂಗ್ರೆಸ್ ಆಯೋಜಿಸಿದೆ.
ಪ್ರಸಿದ್ಧ ಗಾಯಕಿ ಸುನಿಧಿ ಚೌಹಾಣ್ ಅವರು ಗಾಯನ ಪ್ರಸ್ತುತಪಡಿಸಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಇದೇ 19ರಂದು ಆಳ್ವಾರ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.