ಚೆನ್ನೈ: ಪ್ರತ್ಯೇಕವಾಗಿ ವಾಸಿಸುತ್ತಿರುವ ತಮ್ಮ ಪತ್ನಿ ಹಾಗೂ ಹಿರಿಯ ಐಎಎಸ್ ಅಧಿಕಾರಿ ಬೀಲಾ ವೆಂಕಟೇಶನ್ ಅವರ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ ಬೆದರಿಕೆವೊಡ್ಡಿದ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ವಿಶೇಷ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೇಶ್ ದಾಸ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ರಾಜೇಶ್ ದಾಸ್ ಅವರನ್ನು ಶುಕ್ರವಾರ ಬೆಳಿಗ್ಗೆ ಐ.ಟಿ ಕಾರಿಡಾರ್‌ನ ಕೆಳಂಬಾಕ್ಕಂನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಯಿತು. ಅವರ ವಿರುದ್ಧ ಅತಿಕ್ರಮಣ ಮತ್ತು ಕ್ರಿಮಿನಲ್ ಬೆದರಿಕೆಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ದಾಸ್ ಮತ್ತು ಅವರ ಸಹಚರರು ಮೇ 18ರಂದು ಥೈಯೂರ್‌ನಲ್ಲಿರುವ ನನ್ನ ಮನೆಗೆ ನುಗ್ಗಿ, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ನನಗೆ ಬೆದರಿಕೆ ಒಡ್ಡಿದ್ದಾರೆ’ ಎಂದು ಆರೋಪಿಸಿ ರಾಜ್ಯ ಇಂಧನ ಇಲಾಖೆಯ ಕಾರ್ಯದರ್ಶಿಯಾಗಿರುವ ಬೀಲಾ ವೆಂಕಟೇಶನ್ ಅವರು ಸೋಮವಾರ ದೂರು ನೀಡಿದ್ದರು.
ದಾಸ್ ಮತ್ತು ಬೀಲಾ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ದಾಸ್ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ದಾಸ್ ವಾಸವಿರುವ ಮನೆಗೆ ವಿದ್ಯುತ್ ಸೌಲಭ್ಯ ಕಡಿತಗೊಳಿಸಿರುವುದು ಗಲಾಟೆಗೆ ಕಾರಣವಾಗಿದೆ. ತನ್ನ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಹೊಂದಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಹಕ್ಕು ತನಗೆ ಇದೆ ಎಂದು ತಮ್ಮ ಕ್ರಮವನ್ನು ಬೀಲಾ ಸಮರ್ಥಿಸಿಕೊಂಡಿದ್ದಾರೆ.
1989ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ದಾಸ್ ಅವರು 2021ರ ಫೆಬ್ರುವರಿಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಭೇಟಿಯ ಸಮಯದಲ್ಲಿ ಕಿರಿಯ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿದ್ದರು. ಸರ್ಕಾರ ಅವರನ್ನು ಅಮಾನತುಗೊಳಿಸಿತ್ತು. ಈ ಪ್ರಕರಣದಲ್ಲಿ ವಿಲ್ಲುಪುರ ಕೋರ್ಟ್ ಕಳೆದ ವರ್ಷ ದಾಸ್ ಅವರಿಗೆ ಶಿಕ್ಷೆ ವಿಧಿಸಿತ್ತು. 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ದಾಸ್ ಅವರನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಾತ್ಕಾಲಿಕ ಪರಿಹಾರ ಆದೇಶದ ಮೇಲೆ ಬಿಡುಗಡೆಗೊಳಿಸಿತ್ತು. 2023ರಲ್ಲಿ ಅವರು ಸ್ವಯಂ ನಿವೃತ್ತಿ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.