ಬೆಂಗಳೂರು: ಕಾಂಗ್ರೆಸ್ ಪಕ್ಷದಹಿರಿಯ ನಾಯಕ ಮತ್ತು ಕೇಂದ್ರ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ನಿಧನರಾಗಿದ್ದಾರೆ.ಅವರಿಗೆ 85 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಷರೀಫ್ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ಕೊಯುಸಿರೆಳೆದಿದ್ದಾರೆ.
ಶುಕ್ರವಾರ ನಮಾಜ್ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಷರೀಫ್ ಅವರನ್ನು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದಿ ಹಿಂದೂ ಪತ್ರಿಕೆ ವರದಿ ಪ್ರಕಾರ ಷರೀಫ್ ಅವರು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ India Wins Freedom ಎಂಬ ಕೃತಿಯ ಉರ್ದು ಅನುವಾದವನ್ನು ಬಿಡುಗಡೆ ಮಾಡುವ ಕಾರ್ಯದಲ್ಲಿ ಬ್ಯುಸಿ ಆಗಿದ್ದರು. ನವೆಂಬರ್ 28ರಂದು ಅರಮನೆ ಮೈದಾನದಲ್ಲಿ ಪುಸ್ತಕಬಿಡುಗಡೆ ಕಾರ್ಯಕ್ರಮ ನಿಗದಿಯಾಗಿದ್ದು, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಲಾಗಿತ್ತು.
ನಿಷ್ಠಾವಂತ ರಾಜಕಾರಣಿ
ಮಾಜಿ ಪ್ರಧಾನಿ ದಿವಂಗತ ಪಿ.ವಿ.ನರಸಿಂಹರಾವ್ ಅವರ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದ ಇವರು ರೈಲ್ವೇ ಗೇಜ್ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಮೀಟರ್ ಗೇಜ್‍ನ್ನು ಬ್ರಾಡ್‍ಗೇಜ್‍ಗೆ ಪರಿವರ್ತಿಸಿದ್ದಲ್ಲದೆ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳನ್ನು ಪೂರ್ತಿಗೊಳಿಸಿದ್ದರು. ವಿಶೇಷವಾಗಿ ಬೆಂಗಳೂರಿನಲ್ಲಿ ರೈಲ್ವೆ ಗಾಲಿ ಮತ್ತು ಅಚ್ಚು ಕಾರ್ಖಾನೆ ಸ್ಥಾಪನೆಯಾಗಲು ಷರೀಫ್ ಅವರು ಕಾರಣರಾಗಿದ್ದರು.
ರಾಜಕೀಯ ಜೀವನ
1933 ನವೆಂಬರ್ 3ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಜನಿಸಿದ್ದ ಜಾಫರ್ ಷರೀಫ್ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಅಧಿಕಾರವಧಿಯಲ್ಲಿ ರಾಜಕೀಯ ಪ್ರವೇಶಿಸಿದ್ದರು. ಆಮೇಲೆ ಕಾಂಗ್ರೆಸ್ ಇಬ್ಭಾಗವಾದಾಗ ಷರೀಫ್ ಇಂದಿರಾ ಗಾಂಧಿಯವರ ಪರ ವಹಿಸಿದ್ದರು.
ಏಳು ಬಾರಿ ಲೋಕ ಸಭಾ ಸದಸ್ಯರಾಗಿದ್ದ ಷರೀಫ್ 2004ರಲ್ಲಿ ಸೋತ ನಂತರ ರಾಜಕೀಯದಿಂದಲೇ ತೆರೆಮರೆಗೆ ಸರಿದಿದ್ದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು ಐದು ಬಾರಿ ಇಲ್ಲಿಂದ ಗೆಲುವು ಸಾಧಿಸಿದ್ದರು. 2004ರಲ್ಲಿ ಅಂದಿನ ಬಿಜೆಪಿ ಅಭ್ಯರ್ಥಿ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಪಿ.ಸಾಂಗ್ಲಿಯಾನ ಎದುರು ಪರಾಭವಗೊಂಡ ನಂತರ ಇವರು ಚುನಾವಣೆ ಗೆದ್ದಿಲ್ಲ.
ಪಕ್ಷ ಮತ್ತು ನಿಷ್ಠೆಗೆ ಹೆಸರಾಗಿದ್ದ ಜಾಫರ್ ಷರೀಫ್ ಹೈಕಮಾಂಡ್‍ನಲ್ಲಿ ಅತ್ಯಂತ ಪ್ರಭಾವಿ ಮುಖಂಡರಾಗಿದ್ದರು. ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಕಾಲದಿಂದಲೂ ಗಾಂಧಿ ಕುಟುಂಬಕ್ಕೆ ನಿಷ್ಠಾವಂತರಾಗಿದ್ದ ಷರೀಫ್ ಅವರ ಪುತ್ರ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ನಂತರಸಕ್ರಿಯ ರಾಜಕಾರಣದಿಂದಲೇ ದೂರವಾಗಿದ್ದರು.
ಷರೀಫ್ ಕುಟುಂಬ
ಜಾಫರ್ ಷರೀಫ್ ಅವರ ಪತ್ನಿ ಅಮಿನಾಭಿ ಅವರು 2009ರಲ್ಲಿ ನಿಧನರಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿ ನಾಲ್ವರು ಮಕ್ಕಳು. ಅದರಲ್ಲಿ ಕಿರಿಯ ಪುತ್ರ ಖಾದರ್ ನವಾಜ್ ಷರೀಫ್ 1999ರಲ್ಲಿ ನಿಧನರಾಗಿದ್ದಾರೆ. ಹಿರಿಯ ಪುತ್ರ ಅಬ್ದುಲ್ ಖರೀಮ್ ಅವರು 2009ರಲ್ಲಿ ನಿಧನರಾಗಿದ್ದಾರೆ. ಒಂದೇ ವರ್ಷ ತಾಯಿ ಮತ್ತು ಪುತ್ರ ಇಬ್ಬರೂ ನಿಧನರಾಗಿದ್ದಾರೆ.
ಇಬ್ಬರು ಮೊಮ್ಮಕ್ಕಳು ಇದ್ದು, ರೆಹಮಾನ್ ಷರೀಫ್ ಅವರಿಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್ ಕೊಡಿಸಲು ಷರೀಫ್ ಯತ್ನಿಸಿದ್ದರು. ಈ ಹಿಂದೆ ರೆಹಮಾನ್ ಷರೀಫ್ ಎರಡು ಬಾರಿ ಟಿಕೆಟ್ ನೀಡಿದ್ದಾಗಲೂ ಸೋತಿದ್ದರು. ಈ ಬಾರಿ ಟಿಕೆಟ್ ನೀಡಿರಲಿಲ್ಲ. ಷರೀಫ್ಅವರ ಮತ್ತೊಬ್ಬ ಮೊಮ್ಮಗ ವಹಾಬ್.
ಗಣ್ಯರಶ್ರದ್ಧಾಂಜಲಿ
ಕಾಂಗ್ರೆಸ್ಪಕ್ಷದ ಹಿರಿಯ ನಾಯಕ, ಹಲವಾರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ, ಭಾರತದ ಯಶಸ್ವಿ ರೈಲ್ವೆ ಸಚಿವ, ಕರ್ನಾಟಕದ ಪುತ್ರ ಶ್ರೀ ಸಿ.ಕೆ ಜಾಫರ್ ಷರೀಫ್ ವಿಧಿವಶರಾಗಿದ್ದಾರೆ. ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ರಾಷ್ಟ್ರೀಯ ನಾಯಕರಾಗಿದ್ದರು ಷರೀಫ್.ಶ್ರದ್ಧಾಂಜಲಿ
ದಿನೇಶ್ ಗುಂಡೂರಾವ್
ರೈಲ್ವೆ ಇಲಾಖೆಗೆ ಕೊಡುಗೆ
‘ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಕೇಂದ್ರದ ಮಾಜಿ ರೈಲ್ವೆ ಸಚಿವರಾಗಿದ್ದ ಸಿ.ಕೆ.ಜಾಫರ್ ಷರೀಫ್ ಅವರು ನಿಧನರಾದ ಸುದ್ದಿ ತೀವ್ರ ದುಃಖದ ಸಮಾಚಾರವಾಗಿದೆ. ರೈಲ್ವೆ ಸಚಿವರಾಗಿ ಅವರು ಆ ಇಲಾಖೆಯಲ್ಲಿ ತಂದ ಸುಧಾರಣೆ ಮತ್ತು ಕರ್ನಾಟಕಕ್ಕೆ ನೀಡಿದ ಕೊಡುಗೆ ಅಭೂತಪೂರ್ವ ಮತ್ತು ಕ್ರಾಂತಿಕಾರಕವಾದವು. ಅವರನ್ನು ಕಳೆದುಕೊಂಡಿರುವ ನಾಡು ನೋವನ್ನು ಅನುಭವಿಸುತ್ತಿದೆ. ಅವರ ನಿಧನದಿಂದ ಉಂಟಾಗಿರುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದಯಾಮಯನು ಅವರ ಕುಟುಂಬಕ್ಕೂ ಸಮಸ್ತರಿಗೂ ನೀಡಲೆಂದು ಪ್ರಾರ್ಥಿಸುತ್ತೇನೆ’
-ಆರ್.ವಿ.ದೇಶಪಾಂಡೆ
ಕಂದಾಯ ಸಚಿವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.