ನವದೆಹಲಿ: ಕೇಂದ್ರದ ಮಾಜಿ ಸಚಿವ ರಘುವಂಶ್ ಪ್ರಸಾದ್ ಸಿಂಗ್(74) ಅವರು ಭಾನುವಾರ ನಿಧನರಾದರು. ವಾರದಿಂದ ಅವರು ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಜೂನ್‌ನಲ್ಲಿ ಕೋವಿಡ್ ಪಾಸಿಟಿವ್ ಆಗಿದ್ದ ಬಿಹಾರ ಮುಖಂಡ ರಘುವಂಶ್ ಪ್ರಸಾದ್ ಅವರು ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ಮತ್ತೆ ಕೋವಿಡ್ ಗುಣಮುಖರಾದ ನಂತರ ಕಾಣಿಸಿಕೊಂಡಿದ್ದ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕಳೆದ ಶುಕ್ರವಾರ ವೆಂಟಿಲೇಟರ್ ಸಹಕಾರದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.
ನರೇಗಾ ಯೋಜನೆ ಹಿಂದಿನ ಶಕ್ತಿ ಎಂದೇ ಅವರನ್ನು ಕಾಣಲಾಗುತ್ತದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಲೋಕಸಭೆಗೆ ದಾಖಲೆಯ ಐದು ಬಾರಿ ಆಯ್ಕೆಯಾಗಿದ್ದ ವೈಶಾಲಿ ಕ್ಷೇತ್ರದಲ್ಲಿ ಕಳೆದ ಎರಡೂ ಚುನಾವಣೆಗಳಲ್ಲಿ (2014 ಮತ್ತು 2019) ಅವರು ಸೋಲು ಕಂಡಿದ್ದರು.
ರಘುವಂಶ್ ಪ್ರಸಾದ್ ಅವರು ಇದೇ ಗುರುವಾರ (ಸೆಪ್ಟೆಂಬರ್ 10) ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷ ತೊರೆದಿದ್ದರು. ಈ ಸಂಬಂಧ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದರು.
ಅವರು ಜೂನ್‌ನಲ್ಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಲಾಲು ಪ್ರಸಾದ್ ಮನವೊಲಿಸಿದ ಬಳಿಕ ತಮ್ಮ ನಿರ್ಧಾರವನ್ನು ಹಿಂಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.