ADVERTISEMENT

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನಿಧನ

ಪಿಟಿಐ
Published 8 ಆಗಸ್ಟ್ 2024, 6:17 IST
Last Updated 8 ಆಗಸ್ಟ್ 2024, 6:17 IST
ಬುದ್ಧದೇವ್ ಭಟ್ಟಾಚಾರ್ಯ
ಬುದ್ಧದೇವ್ ಭಟ್ಟಾಚಾರ್ಯ   (ಸಂಗ್ರಹ ಚಿತ್ರ)

ಕೋಲ್ಕತ್ತ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಸಿಪಿಎಂ ಪಕ್ಷದ ಧುರೀಣ ಬುದ್ಧದೇವ್ ಭಟ್ಟಾಚಾರ್ಯ ಗುರುವಾರ ಬೆಳಿಗ್ಗೆ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಹಮ್ಮದ್‌ ಸಲೀಂ ತಿಳಿಸಿದ್ದಾರೆ. ಬುದ್ಧದೇವ್‌ ಭಟ್ಟಾಚಾರ್ಯ ಅವರಿಗೆ ಪತ್ನಿ ಮೀರಾ, ಪುತ್ರಿ ಸುಚೇತನಾ ಇದ್ದಾರೆ. ಮಗಳು ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಭಟ್ಟಾಚಾರ್ಯ ಅವರ ಪಾರ್ಥಿವ ಶರೀರವನ್ನು ಗುರುವಾರ ಶವಾಗಾರದಲ್ಲೇ ಇರಿಸಲಾಗುತ್ತದೆ. ಶುಕ್ರವಾರ, ಅಲಿಮುದ್ದೀನ್ ರಸ್ತೆಯಲ್ಲಿರುವ ಪಕ್ಷದ ಕಚೇರಿಗೆ ತರಲಾಗುವುದು. ಅಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಲೀಂ ತಿಳಿಸಿದರು.

ADVERTISEMENT

ಭಟ್ಟಾಚಾರ್ಯ ಅವರು ತಮ್ಮ ದೇಹವನ್ನು ವೈದ್ಯಕೀಯ ಸಂಶೋಧನೆಗೆ ಒಪ್ಪಿಸಲು ತೀರ್ಮಾನಿಸಿದ್ದರು. ಅದರಂತೆ, ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಆಸ್ಪತ್ರೆಗೆ ಒಪ್ಪಿಸಲಾಗುತ್ತದೆ ಎಂದೂ ಅವರು ವಿವರಿಸಿದರು.

ಸರ್ಕಾರಿ ಗೌರವ: ಭಟ್ಟಾಚಾರ್ಯ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ‘ಅವರ ಅಂತಿಮ ಯಾತ್ರೆಯಲ್ಲಿ ಪೂರ್ಣಪ್ರಮಾಣದ ಸರ್ಕಾರಿ ಗೌರವ ಸಲ್ಲಿಸಲಾಗುವುದು’ ಎಂದು ಪ್ರಕಟಿಸಿದರು.

ಪರಿಚಯ: ಸಿಪಿಎಂ ಪಕ್ಷದ ಹಿರಿಯ ನಾಯಕರಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು 2000ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ, ಪಕ್ಷದ ಹಿರಿಯ ಧುರೀಣ ಜ್ಯೋತಿಬಸು ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

2011ರ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಪಕ್ಷದ ವಿರುದ್ಧ ಸಿಪಿಎಂ ನೇತೃತ್ವದ ಎಡರಂಗ ಪರಾಭವಗೊಂಡಿತ್ತು. ಈ ಮೂಲಕ ರಾಜ್ಯದಲ್ಲಿ ಸಿಪಿಎಂ ಪಕ್ಷದ 34 ವರ್ಷಗಳ ಸುದೀರ್ಘ ಆಡಳಿತವೂ ಅಂತ್ಯಗೊಂಡಿತ್ತು.

ಸಿಪಿಎಂ ಪಕ್ಷದ ಸುದೀರ್ಘ ಆಡಳಿತಾವಧಿ ಅಂತ್ಯ ಮತ್ತು ಪಶ್ಚಿಮ ಬಂಗಾಳದಲ್ಲಿ ಕೈಗಾರೀಕರಣಕ್ಕಾಗಿ ಬಂಡವಾಳವನ್ನು ಆಕರ್ಷಿಸಲು ಪಕ್ಷದ  ಹಾಗೂ ರಾಜಕೀಯ ಸಿದ್ಧಾಂತಗಳನ್ನು ಬದಿಗಿಟ್ಟಿದ್ದರು ಎಂಬ ಕಾರಣಕ್ಕಾಗಿ ಅವರು ನೆನಪಾಗುತ್ತಾರೆ.

ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಸ್ವಾಧೀನ ಪಡೆಯುವುದರ ವಿರುದ್ಧ ತೀವ್ರ ಪ್ರತಿಭಟನೆಗಳು ಇವರ ಅಧಿಕಾರವಧಿಯಲ್ಲಿ ನಡೆದಿದ್ದವು. ‘ನಂದಿಗ್ರಾಮ ಆಂದೋಲನ’ ಸೇರಿದಂತೆ ಬಹುತೇಕ ಪ್ರತಿಭಟನೆಗಳ ಮುಂದಾಳತ್ವವನ್ನು ಮಮತಾ ಬ್ಯಾನರ್ಜಿ ಅವರೇ ವಹಿಸಿದ್ದರು.

ಸಿಪಿಎಂ ಪಕ್ಷದ ಪಾಲಿಟ್‌ಬ್ಯೂರೊ ಮತ್ತು ಕೇಂದ್ರ ಸಮಿತಿಯ ಸದಸ್ಯತ್ವಕ್ಕೆ 2015ರಲ್ಲಿ ರಾಜೀನಾಮೆ ನೀಡಿದ್ದರು. 2018ರಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು.

ಮಾರ್ಚ್ 1, 1944ರಲ್ಲಿ ಕೋಲ್ಕತ್ತದಲ್ಲಿ ಜನಿಸಿದ್ದರು. 1960ರಲ್ಲಿ ಸಿಪಿಎಂ ಸೇರಿದ್ದರು. ತಾತ ಕೃಷ್ಣಾಚಂದ್ರ ಸ್ಮೃತಿತೀರ್ಥ ಸಂಸ್ಕೃತ ವಿಧ್ವಾಂಸರು. ಅರ್ಚಕರಿಗಾಗಿ ಕೈಪಿಡಿ ಸಿದ್ಧಪಡಿಸಿದ್ದರು. ಬೆಂಗಾಳಿ ಕವಿ ಸುಕಾಂತಾ ಭಟ್ಟಾಚಾರ್ಯ, ಬುದ್ಧದೇವ್ ಅವರ ದೂರದ ಸಂಬಂಧಿ.

ಕಳೆದ ಕೆಲ ವರ್ಷಗಳಿಂದ ಸಾರ್ವಜನಿಕ ಬದುಕಿನಿಂದಲೇ ದೂರ ಉಳಿದಿದ್ದರು. ದಕ್ಷಿಣ ಕೋಲ್ಕತ್ತದ ಪಾಮ್ ಅವೆನ್ಯೂನಲ್ಲಿ, ತಮ್ಮ ಎರಡು ಕೊಠಡಿಗಳ ಸರ್ಕಾರಿ ಅಪಾರ್ಟ್‌ಮೆಂಟ್‌ನ ಚೌಕಟ್ಟಿಗೇ ಬದುಕು ಸೀಮಿತಗೊಳಿಸಿದ್ದರು. ಗುರುವಾರ ಅಲ್ಲಿಯೇ ಕೊನೆಯುಸಿರೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.